ಜೆಸಿಬಿಗೆ ನೇತುಹಾಕಿ ಚಾಲಕನಿಗೆ ಚಿತ್ರಹಿಂಸೆ: ರೌಡಿಶೀಟರ್‌ನ ಕ್ರೂರತೆಯ ವಿಡಿಯೋ ವೈರಲ್

Befunky collage (2)

ರಾಜಸ್ಥಾನದ ಬೇವಾರ್ ಜಿಲ್ಲೆಯ ರಾಯಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸ್ಥಳೀಯ ರೌಡಿಶೀಟರ್ ತೇಜ್‌ಪಾಲ್ ಸಿಂಗ್ ಉದಾವತ್ ತನ್ನ ಜೆಸಿಬಿ ಚಾಲಕನನ್ನು ಜೆಸಿಬಿಗೆ ನೇತುಹಾಕಿ, ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಸುಮಾರು ಮೂರು ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬೆಳಕಿಗೆ ಬಂದಿದೆ.

ವೈರಲ್ ವಿಡಿಯೋದಲ್ಲಿ, ತೇಜ್‌ಪಾಲ್ ಸಿಂಗ್ ತನ್ನ ಚಾಲಕನ ಕಾಲುಗಳನ್ನು ಜೆಸಿಬಿ ಯಂತ್ರದ ಹುಕ್‌ಗೆ ಕಟ್ಟಿ, ತಲೆಕೆಳಗಾಗಿ ನೇತುಹಾಕಿರುವ ದೃಶ್ಯ ಕಾಣಿಸುತ್ತದೆ. ಆತನನ್ನು ಬೆಲ್ಟ್‌ನಿಂದ ಥಳಿಸಿ, ಗಾಯಗಳ ಮೇಲೆ ಉಪ್ಪು ಹಚ್ಚಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾನೆ. ಸುಮಾರು ಮೂರು ಗಂಟೆಗಳ ಕಾಲ ಈ ದೌರ್ಜನ್ಯ ನಡೆದಿದ್ದು, ಫಾರ್ಮ್‌ಹೌಸ್‌ನಲ್ಲಿ ಜನರಿದ್ದರೂ ರೌಡಿಶೀಟರ್‌ಗೆ ಭಯಪಟ್ಟು ಯಾರೂ ಚಾಲಕನ ರಕ್ಷಣೆಗೆ ಮುಂದಾಗಿಲ್ಲ. ಗುಡಿಯಾ ಗ್ರಾಮದ ನಿವಾಸಿಯಾಗಿರುವ ತೇಜ್‌ಪಾಲ್, ತನ್ನ ಫಾರ್ಮ್‌ಹೌಸ್‌ನಲ್ಲಿ ಜೆಸಿಬಿ ಯಂತ್ರಗಳು ಮತ್ತು ಡಂಪರ್‌ಗಳನ್ನು ಹೊಂದಿದ್ದು, ಅಕ್ರಮ ಜಲ್ಲಿಗಲ್ಲು ಗಣಿಗಾರಿಕೆ ಮತ್ತು ಸಾಗಾಟದಲ್ಲಿ ತೊಡಗಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ವಿರುದ್ಧ ರಾಯಪುರ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಈ ಘಟನೆಗೆ ಕಾರಣ, ಚಾಲಕನ ಮೇಲೆ ಡೀಸೆಲ್ ಕಳ್ಳತನದ ಶಂಕೆ ಎಂದು ಹೇಳಲಾಗಿದೆ. ತೇಜ್‌ಪಾಲ್ ತನ್ನ ಚಾಲಕನಿಗೆ ಈ ರೀತಿಯ ಶಿಕ್ಷೆ ನೀಡಿದ್ದಾನೆ ಎಂದು ವರದಿಯಾಗಿದೆ. ವಿಡಿಯೋ ವೈರಲ್ ಆದ ನಂತರ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹೋಟ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸರಾ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ರಾಜಸ್ಥಾನದಲ್ಲಿ ಕಾನೂನು ಆಡಳಿತವಿಲ್ಲ, ಮಾಫಿಯಾಗಳ ದಬ್ಬಾಳಿಕೆ ನಡೆಯುತ್ತಿದೆ,” ಎಂದು ಗೆಹೋಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿಯ ದುರ್ಬಲ ಆಡಳಿತದಿಂದ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ,” ಎಂದು ದೋತಾಸರಾ ಆರೋಪಿಸಿದ್ದಾರೆ. ಆರೋಪಿಯ ಬಂಧನಕ್ಕೆ ಗೆಹೋಟ್ ಒತ್ತಾಯಿಸಿದ್ದಾರೆ.

ವಿಡಿಯೋ ಬೆಳಕಿಗೆ ಬಂದ ಕೂಡಲೇ, ಪೊಲೀಸರು ತೇಜ್‌ಪಾಲ್ ಸಿಂಗ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಆರೋಪಿಗೆ ಕಠಿಣ ಶಿಕ್ಷೆಯ ಒತ್ತಾಯಿಸುತ್ತಿದ್ದಾರೆ.

Exit mobile version