ಟೈಮ್ ಆದ್ರೂ ಕೆಲಸ ಮಾಡು ಎಂದ ಮ್ಯಾನೇಜರ್, ‘ನೋ’ ಎಂದು ಆಫೀಸ್‌ನಿಂದ ಹೊರನಡೆದ ಉದ್ಯೋಗಿ

Untitled design (3)

ಕಚೇರಿಯಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚುವರಿ ಕೆಲಸದ ಒತ್ತಡಕ್ಕೆ ಒಳಗಾಗದೇ, ಯುವತಿಯೊಬ್ಬಳು ತನ್ನ ಮ್ಯಾನೇಜರ್‌ಗೆ ಸ್ಪಷ್ಟವಾಗಿ ‘ನೋ’ ಎಂದು ಹೇಳಿ ಆಫೀಸ್‌ನಿಂದ ಹೊರನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಕೆಲಸದ ಸ್ಥಳದ ಟಾಕ್ಸಿಕ್ ಸಂಸ್ಕೃತಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

‘Kad shatakshi’ ಎಂಬ ಖಾತೆಯಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ, ಯುವತಿಯೊಬ್ಬಳು ಕಚೇರಿಯ ಕೆಲಸದ ಸಂಸ್ಕೃತಿಯ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಜನರೇಷನ್ ಝೆಡ್‌ಗೆ ಸೇರಿದ ಈ ಯುವತಿ, ಹಿಂದಿನ ತಲೆಮಾರಿನ (ಎಕ್ಸ್ ಮತ್ತು ವೈ) ಜನರಂತೆ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ.

ವಿಡಿಯೋದಲ್ಲಿ ಯುವತಿ ಹೇಳಿರುವುದೇನೆಂದರೆ, “ನಾನೀಗ ಮನೆಗೆ ಹೊರಟಿದ್ದೇನೆ. ನನ್ನ ಮ್ಯಾನೇಜರ್ ಬಂದು, ‘ಶತಾಕ್ಷಿ, ಸ್ವಲ್ಪ ಹೆಚ್ಚುವರಿ ಕೆಲಸವಿದೆ, ದಯವಿಟ್ಟು ಅದನ್ನು ಮಾಡಿ’ ಎಂದರು. ಆದರೆ ನಾನು, ‘ಇಲ್ಲ ಸರ್, ನಾನು ಸಮಯಕ್ಕೆ ಸರಿಯಾಗಿ ಹೋಗಬೇಕು’ ಎಂದೆ. ನಾನು ಆಫೀಸ್‌ನಿಂದ ಬೇಗನೆ ಹೊರಟಿಲ್ಲ. ನನ್ನ ಎಲ್ಲಾ ಕೆಲಸವನ್ನು ಆಫೀಸ್ ಸಮಯದೊಳಗೆ ಮುಗಿಸಿದ್ದೇನೆ. ನಾನು ಹೆಚ್ಚುವರಿ ಸಮಯ ಕಳೆಯಲು ಇಷ್ಟಪಡುವುದಿಲ್ಲ. ಇಂದು ನಾನು ಉಪವಾಸ ಮಾಡುತ್ತಿದ್ದೇನೆ, ನಿನ್ನೆ ರಾತ್ರಿ ರೈಲಿನಲ್ಲಿದ್ದೆ, ಬೆಳಗ್ಗೆ 7:30ಕ್ಕೆ ಆಫೀಸ್‌ಗೆ ಬಂದೆ, ಸಂಜೆ 6:30 ರವರೆಗೆ ಇದ್ದೇನೆ’ ಎಂದು ಖಾರವಾಗಿ ಉತ್ತರಿಸಿದೆ.”

ಯುವತಿಯ ಈ ಧೈರ್ಯದ ಉತ್ತರಕ್ಕೆ ಮ್ಯಾನೇಜರ್, “ನೀವು ಕೆಲಸದ ಸಮಯವನ್ನು ಪೂರೈಸಿದ್ದೀರಿ, ಮನೆಗೆ ಹೋಗಬಹುದು” ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಈ ಘಟನೆಯ ಮೂಲಕ ಯುವತಿ ಕೆಲಸದ ಸ್ಥಳದಲ್ಲಿ ಅನಗತ್ಯ ಒತ್ತಡವನ್ನು ವಿರೋಧಿಸುವ ಮನಸ್ಥಿತಿಯ ಬಗ್ಗೆ ಪ್ರಶ್ನೆ ಎತ್ತಿದ್ದಾಳೆ. “ಈ ರೀತಿಯ ಟಾಕ್ಸಿಕ್ ಕೆಲಸದ ಮನಸ್ಥಿತಿ ಎಲ್ಲಿಂದ ಬರುತ್ತದೆ? ಒಬ್ಬ ವ್ಯಕ್ತಿ ದಿನಕ್ಕೆ ಎರಡು ಹೊತ್ತು ತಿನ್ನಲು ಕೆಲಸ ಮಾಡುತ್ತಾನೆ. ಆದರೆ, ಕಷ್ಟಪಟ್ಟು ದುಡಿದ ಹಣದಿಂದ ನೆಮ್ಮದಿಯಾಗಿ ಜೀವನ ಸಾಗಿಸಲು ಆಗದಿದ್ದರೆ ಏನು ಪ್ರಯೋಜನ? ಅತಿಯಾದ ಕೆಲಸದ ಒತ್ತಡವನ್ನು ಸಹಿಸಿಕೊಳ್ಳುವುದು ನರಕಕ್ಕೆ ಸಮಾನ. ನನ್ನನ್ನು ಕೆಲಸದಿಂದ ತೆಗೆದುಹಾಕಿದರೂ ನಾನು ಚಿಂತೆ ಮಾಡುವುದಿಲ್ಲ, ಆದರೆ ಹೆಚ್ಚುವರಿ ಕೆಲಸವನ್ನು ಒಪ್ಪುವುದಿಲ್ಲ,” ಎಂದು ಆಕೆ ತನ್ನ ವಿಡಿಯೋದಲ್ಲಿ ಖಾರವಾಗಿ ಹೇಳಿದ್ದಾಳೆ.

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರು ಯುವತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರ, “ಮ್ಯಾನೇಜರ್‌ಗೆ ಧೈರ್ಯವಾಗಿ ‘ನೋ’ ಎನ್ನುವ ಗುಣ ಬೇಕು. ಇಲ್ಲದಿದ್ದರೆ ಒತ್ತಡ ಭರಿತ ಕೆಲಸದ ವಾತಾವರಣ ಸೃಷ್ಟಿಯಾಗುತ್ತದೆ,” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ವಿಪರೀತ ಕೆಲಸ ಮಾಡುವುದು ಹೆಮ್ಮೆಯ ವಿಷಯವಲ್ಲ, ಅದು ಒಂದು ರೀತಿಯ ದೌರ್ಜನ್ಯ. ಇಂತಹ ಸಂದರ್ಭಗಳನ್ನು ವಿರೋಧಿಸುವುದು ಮುಖ್ಯ,” ಎಂದು ಬೆಂಬಲಿಸಿದ್ದಾರೆ. ಇನ್ನೊಬ್ಬರು, “ನಿಮ್ಮ ಮಾತು ಸರಿಯಾಗಿದೆ, ಜೊತೆಗೆ ನಿಮ್ಮ ಕಣ್ಣುಗಳು ತುಂಬಾ ಸುಂದರವಾಗಿವೆ,” ಎಂದು ಹಾಸ್ಯದಿಂದ ಕಾಮೆಂಟ್ ಮಾಡಿದ್ದಾರೆ.

ಈ ಘಟನೆ ಕೆಲಸದ ಸ್ಥಳದಲ್ಲಿ ಟಾಕ್ಸಿಕ್ ಕೆಲಸದ ಸಂಸ್ಕೃತಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಜನರೇಷನ್ ಝೆಡ್‌ನ ಉದ್ಯೋಗಿಗಳು ಕೆಲಸ ಮತ್ತು ಜೀವನದ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅನಗತ್ಯ ಒತ್ತಡವನ್ನು ವಿರೋಧಿಸುವ ಈ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೆಚ್ಚಿಕೊಂಡಿದ್ದಾರೆ. ಕಂಪನಿಗಳು ತಮ್ಮ ನೌಕರರಿಗೆ ಸರಿಯಾದ ಕೆಲಸದ ವಾತಾವರಣವನ್ನು ಒದಗಿಸಬೇಕು ಎಂಬ ಒತ್ತಾಯವೂ ಈ ವಿಡಿಯೋದ ಮೂಲಕ ಎದ್ದುಕಾಣುತ್ತಿದೆ.

Exit mobile version