ವಿದ್ಯಾರ್ಥಿಯ ಹಾಲ್​ ಟಿಕೆಟ್​ ಕದ್ದೊಯ್ದ ಹದ್ದು: ವಿಡಿಯೋ ವೈರಲ್

Untitled design 2025 04 11t195645.386

ಪರೀಕ್ಷಾ ಗದ್ದಲ, ನಿರೀಕ್ಷೆಗಳ ಮಧ್ಯೆ ವಿದ್ಯಾರ್ಥಿಯೊಬ್ಬನು ಎದುರಿಸಿದ ಅಪರೂಪದ ಘಟನೆ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೋತಿಗಳು ಮನುಷ್ಯರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಮರಕ್ಕೆ ಏರಿ ಕುಳಿತುಕೊಳ್ಳುವುದು ಸಾಮಾನ್ಯ. ಆದರೆ ಹದ್ದುಗಳು, ಅಂದರೆ ಹಕ್ಕಿಗಳು ಈ ರೀತಿ ಮನುಷ್ಯರ ಕೈಯಿಂದ ಏನಾದರೂ ಕಸಿದುಕೊಳ್ಳುವುದು ಬಹಳ ಅಪರೂಪ. ಆದರೆ ಕೇರಳದ ಕಾಸರಗೋಡಿನಲ್ಲಿ ಸಂಭವಿಸಿದ ಈ ಘಟನೆಯು ಎಲ್ಲರ ಗಮನ ಸೆಳೆದಿದೆ.

ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬನಿಗೆ ಬೆಳಗ್ಗೆ 7:30ಕ್ಕೆ ಪರೀಕ್ಷೆ ಆರಂಭವಾಗಬೇಕಿತ್ತು. ಹಾಲ್‌ ಟಿಕೆಟ್‌ ಹಿಡಿದು ಪರೀಕ್ಷಾ ಹಾಲ್ ಎದುರು ನಿಂತಿದ್ದ ಆ ವಿದ್ಯಾರ್ಥಿಗೆ ನಿರೀಕ್ಷೆಯೇ ಇಲ್ಲದ ರೀತಿಯಲ್ಲಿ ಹದ್ದೊಂದು ಬಂದು ಹಾಲ್‌ ಟಿಕೆಟ್‌ ಕಸಿದುಕೊಂಡು ಹಾರಿತ್ತು. ಆ ಹದ್ದು ಶಾಲೆಯ ಮೇಲ್ಮಹಡಿಗೆ ಹಾರಿ, ಕಿಟಕಿಯ ಬಾಗಿಲಿನಲ್ಲಿ ಕುಳಿತು, ತನ್ನ ಕೊಕ್ಕಿನಲ್ಲಿ ಹಾಲ್‌ ಟಿಕೆಟ್ ಹಿಡಿದು ಕುತಿತ್ತು.

ಈ ದೃಶ್ಯ ನೋಡಿ ವಿದ್ಯಾರ್ಥಿಯು ಆತಂಕಗೊಂಡಿದ್ದನು. ಪರೀಕ್ಷೆಯ ತಕ್ಷಣದ ಹೊತ್ತಿನಲ್ಲಿ, ಇದೊಂದು ದೊಡ್ಡ ಅಡೆತಡೆಯಾಗಿತ್ತು. ವಿದ್ಯಾರ್ಥಿ ಮತ್ತು ಸುತ್ತಮುತ್ತಲಿನವರನ್ನು ಈ ಘಟನೆ ಅಚ್ಚರಿಗೊಳಿಸಿತ್ತು. ಹದ್ದು ಯಾವುದೇ ಭಯವಿಲ್ಲದೆ, ಜನಸಂದಣಿ ಇರುವ ಕೆಳಗೆ ತಿರುಗಿ ನೋಡದೆ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿತ್ತು.

ಆತಂಕದ ಆ ಕ್ಷಣದಲ್ಲಿ ವಿದ್ಯಾರ್ಥಿ ಎಷ್ಟು ದೇವರನ್ನು ಪ್ರಾರ್ಥಿಸಿದನೋ ತಿಳಿಯದು, ಆದರೆ ಕೊನೆಗೂ ಹದ್ದು ದಯೆ ತೋರಿ, ಪರೀಕ್ಷೆ ಆರಂಭವಾಗಲು ಕೆಲ ಸೆಕೆಂಡುಗಳು ಬಾಕಿ ಇರುವ ಹೊತ್ತಿನಲ್ಲಿ ಹಾಲ್‌ ಟಿಕೆಟ್ ಕೆಳಗೆ ಬಿಟ್ಟಿತ್ತು. ವಿದ್ಯಾರ್ಥಿ ತಕ್ಷಣವೇ ಟಿಕೆಟ್‌ ಪಡೆದುಕೊಂಡು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಪಡೆದಿದ್ದಾನೆ. ಅಧಿಕಾರಿಗಳು ಕೂಡ ಕೂಡಲೇ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಯಾವುದೇ ಅಡಚಣೆ ಇಲ್ಲದಂತೆ ಪರೀಕ್ಷೆಗೆ ಅವಕಾಶ ನೀಡಿದ್ದಾರೆ. ವಿದ್ಯಾರ್ಥಿಯು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆದಿದ್ದಾರೆ.

ಈ ದೃಶ್ಯವನ್ನು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version