ಜಗತ್ತು ವಿಚಿತ್ರ ವ್ಯಕ್ತಿಗಳಿಂದ ತುಂಬಿದೆ. ಕೆಲವರ ಹವ್ಯಾಸಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ, ಕೆಲವು ಆಘಾತಕ್ಕೆ ಒಡ್ಡುತ್ತವೆ. ಇಂತಹದ್ದೊಂದು ವಿಚಿತ್ರ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಚಿಕಾಗೋದ 26 ವರ್ಷದ ಯುವಕ ಕಾರ್ಲೋಸ್ ಪ್ರತಿದಿನ 100ಕ್ಕೂ ಹೆಚ್ಚು ಜೀವಂತ ಕೀಟಗಳನ್ನು ತಿನ್ನುತ್ತಾನೆ. ಇದು TLC ಚಾನಲ್‌ನ ಪ್ರಸಿದ್ಧ ಕಾರ್ಯಕ್ರಮ “ಮೈ ಸ್ಟ್ರೇಂಜ್ ಅಡಿಕ್ಷನ್” ಬಹಿರಂಗವಾಗಿದೆ.
ಕೀಟಗಳು ಅವನ ನೆಚ್ಚಿನ ತಿಂಡಿ!
ಕಾರ್ಲೋಸ್ ಮುಖ್ಯವಾಗಿ ಮೀಲ್‌ವರ್ಮ್ಸ್ (ಹುಳುಗಳು) ಮತ್ತು ಜಿರಳೆಗಳನ್ನು ಜೀವಂತವಾಗಿ ತಿನ್ನುತ್ತಾನೆ. ಅವನ ಪ್ರಕಾರ, ಮೀಲ್‌ವರ್ಮ್ಸ್‌ಗಳ ರುಚಿ ಬೆಣ್ಣೆ ಸವರಿದ ಪಾಪ್‌ಕಾರ್ನ್ನಂತೆ ಇರುತ್ತದೆ. ಜಿರಳೆಗಳು ರುಚಿಕರ ತರಕಾರಿಯಂತೆ ಕಾಣುತ್ತವೆ ಮತ್ತು ನಾಲಿಗೆಗೆ ಮಸಾಜ್ ಮಾಡುವಂತಹ ಅನುಭವ ನೀಡುತ್ತವೆ ಎಂದು ಅವನು ವಿವರಿಸಿದ್ದಾನೆ. “ಅವುಗಳನ್ನು ಅಗಿಯುವಾಗ ಅವುಗಳ ಅದೃಷ್ಟ ನನ್ನ ಕೈಯಲ್ಲಿರುತ್ತದೆ ಎಂದು ಭಾಸವಾಗುತ್ತದೆ. ಇದು ನನಗೆ ತುಂಬಾ ಖುಷಿ ನೀಡುತ್ತದೆ” ಎಂದು ಕಾರ್ಲೋಸ್ ಹೇಳಿದ್ದಾನೆ.
ಬಾಲ್ಯದಿಂದಲೇ ಶುರುವಾದ ಅಭ್ಯಾಸ
ಈ ವಿಚಿತ್ರ ಹವ್ಯಾಸ ಬಾಲ್ಯದಿಂದಲೇ ಬೆಳೆದು ಬಂದಿದೆ. “ನಾನು 4 ವರ್ಷದವನಿದ್ದಾಗಲೇ ಕೀಟಗಳನ್ನು ತಿನ್ನಲು ಶುರು ಮಾಡಿದ್ದೆ” ಎಂದು ಅವನು ತಿಳಿಸಿದ್ದಾನೆ. ಈಗ ಅವನು ನಿರುದ್ಯೋಗಿಯಾಗಿದ್ದರೂ, ಪ್ರತಿದಿನ ಕೀಟಗಳನ್ನು ಖರೀದಿಸಲು ಸುಮಾರು 8 ಡಾಲರ್ (ಭಾರತದಲ್ಲಿ ಸುಮಾರು 650-700 ರೂ.) ಖರ್ಚು ಮಾಡುತ್ತಾನೆ. ಇತರ ಆಹಾರಗಳನ್ನೂ ತಿನ್ನುತ್ತಾನೆ ಆದರೆ ಕೀಟಗಳೇ ಅವನ ಫೇವರೇಟ್.
ಆರೋಗ್ಯ ಅಪಾಯಗಳ ಬಗ್ಗೆ ಎಚ್ಚರಿಕೆ
ವೈದ್ಯರು ಇದನ್ನು ತೀವ್ರ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಜೀವಂತ ಕೀಟಗಳು ದೇಹಕ್ಕೆ ಬ್ಯಾಕ್ಟೀರಿಯಾ, ಪರಾವಲಂಬಿಗಳು ಮತ್ತು ಸೋಂಕುಗಳನ್ನು ತರುತ್ತವೆ. ಕಾಲಾಂತರದಲ್ಲಿ ಇದು ರಕ್ತದಲ್ಲಿ ವಿಷಕಾರಕಗಳನ್ನು ಹರಡಬಹುದು ಎಂದು ತಜ್ಞರು ಹೇಳುತ್ತಾರೆ. ಕಾರ್ಯಕ್ರಮದಲ್ಲಿ ವೈದ್ಯರು ಕಾರ್ಲೋಸ್‌ನನ್ನು ಪರೀಕ್ಷಿಸಿ ಅಪಾಯಗಳನ್ನು ವಿವರಿಸಿದ್ದರು. ಆದರೂ ಅವನು ಈ ಅಭ್ಯಾಸವನ್ನು ಬಿಡಲು ಸಿದ್ಧನಿಲ್ಲ.
ಕುಟುಂಬ ಮತ್ತು ಸ್ನೇಹಿತರು ಅವನಿಂದ ದೂರವಾಗಿದ್ದಾರೆ ಎಂದು ವರದಿಗಳಿವೆ. ಕೆಲವರು ಇದನ್ನು ಅಸಹ್ಯಕರ ಎಂದರೆ, ಕೆಲವರು ಪ್ರೋಟೀನ್ ಮೂಲ ಎಂದು ಚರ್ಚಿಸುತ್ತಿದ್ದಾರೆ. ಭಾರತದಲ್ಲಿ ಕೆಲವು ಸಂಸ್ಕೃತಿಗಳಲ್ಲಿ ಬೇಯಿಸಿದ ಕೀಟಗಳನ್ನು ತಿನ್ನುವ ಪದ್ಧತಿ ಇದ್ದರೂ, ಜೀವಂತವಾಗಿ ತಿನ್ನುವುದು ಅಪರೂಪ ಮತ್ತು ಅಪಾಯಕರ.
