ಪತಿ RJD, ಪತ್ನಿ BJP: ವೋಟ್ ಗುಟ್ಟು ರಟ್ಟಾಗ್ತಿದ್ದಂತೆ ಹೊಡೆದಾಡಿಕೊಂಡ ದಂಪತಿ..!

Web (41)

ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಮಾತ್ರವಲ್ಲ, ಕುಟುಂಬದೊಳಗೂ ಗಲಾಟೆ ಉಂಟಾಗುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಮನೆಗೆ ಬಂದ ದಂಪತಿ, ಯಾರಿಗೆ ವೋಟ್ ಹಾಕಿದ್ದೇವೆ ಎಂಬ ಗುಟ್ಟು ಬಿಟ್ಟುಕೊಟ್ಟ ತಕ್ಷಣ ಕೈಕೈ ಮಿಲಾಯಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಾವಿರಾರು ಮಂದಿ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ.

ಭಾರತದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಪಕ್ಷ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಹಿಂದೆ ಕುಟುಂಬದ ಯಜಮಾನನ ಮಾತೇ ಅಂತಿಮವಾಗಿತ್ತು. ಅವನು ಹೇಳಿದ ಪಕ್ಷಕ್ಕೆ ಎಲ್ಲರೂ ಮತ ಹಾಕುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅಣ್ಣ-ತಮ್ಮ, ಪತಿ-ಪತ್ನಿ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಸಾಮಾನ್ಯವಾಗಿವೆ.

ಸದ್ಯ ಬಿಹಾರ ವಿಧಾನಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಪ್ರಚಾರ ಮುಗಿದು ಮತದಾನ ನಡೆಯುತ್ತಿದೆ. ಮನೆಮನೆಯಲ್ಲಿ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎಂಬ ಚರ್ಚೆ ನಡೆಯುತ್ತಿರುವಾಗ, ಇಲ್ಲೊಬ್ಬ ದಂಪತಿ ಮಾತ್ರ ಚರ್ಚೆಯನ್ನು ಬಿಟ್ಟು ಬಡಿದಾಡಿಕೊಂಡಿದ್ದಾರೆ.

ಮತದಾನ ಮುಗಿಸಿ ಮನೆಗೆ ಬಂದ ನಂತರ ಪತಿ-ಪತ್ನಿ ಚುನಾವಣೆ ಬಗ್ಗೆ ಮಾತನಾಡತೊಡಗಿದ್ದಾರೆ. ಪತಿ ತಾನು RJD (ರಾಷ್ಟ್ರೀಯ ಜನತಾ ದಳ)ಗೆ ಮತ ಹಾಕಿದ್ದೇನೆ ಎಂದು ಹೇಳಿದ್ದಾನೆ. ಪತ್ನಿ ಬಿಜೆಪಿ (ಭಾರತೀಯ ಜನತಾ ಪಕ್ಷ)ಗೆ ವೋಟ್ ಹಾಕಿದ್ದೇನೆ ಎಂದು ಬಾಯ್ಬಿಟ್ಟಿದ್ದಾಳೆ. ಇದನ್ನು ಕೇಳಿದ ತಕ್ಷಣ ಪತಿಯ ಕೋಪ ನೆತ್ತಿಗೇರಿ, ಹೆಂಡ್ತಿಗೆ ಹೊಡೆದಿದ್ದಾನೆ. ಪತ್ನಿ ಕೂಡ ಸುಮ್ಮನಿರದೆ ಜಗಳಕ್ಕಿಳಿದಿದ್ದಾಳೆ. ಮನೆಯೊಳಗಿನ ರಂಪ ಬೀದಿಗೆ ಬಂದು, ಸಾರ್ವಜನಿಕರ ಮುಂದೆಯೇ ಪತಿ ಪತ್ನಿಗೆ ಹೊಡೆದಿದ್ದಾನೆ. ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

ಬಿಹಾರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ ಈ ಘಟನೆ ಸಾರ್ವಜನಿಕರಿಗೆ ಒಂದು ಪಾಠವನ್ನು ಕಲಿಸುತ್ತದೆ – ಮತದಾನ ಖಾಸಗಿ ಹಕ್ಕು, ಅದನ್ನು ಗೌರವಿಸಬೇಕು. ಕುಟುಂಬದೊಳಗೆ ರಾಜಕೀಯ ಚರ್ಚೆಗಳು ಆರೋಗ್ಯಕರವಾಗಿರಬೇಕು, ಹಿಂಸಾತ್ಮಕವಲ್ಲ.

Exit mobile version