ದೇಶಾದ್ಯಂತ ಇಂದು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಯಲಿದೆ. ಪೋಷಕರ ಕನಸುಗಳನ್ನು ಈಡೇರಿಸಲು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಲು ಸಾಕಷ್ಟು ವಿದ್ಯಾರ್ಥಿಗಳು ತೀವ್ರ ತಯಾರಿಯೊಂದಿಗೆ ಈ ಪರೀಕ್ಷೆಗೆ ಸಿದ್ಧರಾಗಿದ್ದಾರೆ.
ಕರ್ನಾಟಕದಲ್ಲಿ ನೀಟ್ ಪರೀಕ್ಷೆಯ ವಿವರ
2025-26ನೇ ಶೈಕ್ಷಣಿಕ ಸಾಲಿನ ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಆಯೋಜಿಸಿರುವ ನೀಟ್ ಪರೀಕ್ಷೆ ದೇಶಾದ್ಯಂತ ಏಕಕಾಲದಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ 381 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ರಾಜ್ಯದಿಂದ 1.49 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:20 ಗಂಟೆಯವರೆಗೆ ನಡೆಯಲಿದೆ.
ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ
ವಿದ್ಯಾರ್ಥಿಗಳು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30 ರೊಳಗೆ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕು. ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಒಯ್ಯಬೇಕು:
-
ಪ್ರವೇಶಾತಿ ಪತ್ರ
-
ಕಾಲೇಜು ನೀಡಿರುವ ಗುರುತಿನ ಚೀಟಿ
-
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಇತರ ಅಂಗೀಕೃತ ಗುರುತಿನ ಚೀಟಿ
-
ಒಂದು ಪೋಸ್ಟ್‌ಕಾರ್ಡ್ ಗಾತ್ರದ ಫೋಟೋ
-
ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಪರೀಕ್ಷೆಗೆ ಹಾಜರಾಗುವವರಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದೆ.
ನೀಟ್ ಪರೀಕ್ಷೆಯ ವಸ್ತ್ರ ಸಂಹಿತೆ ಮತ್ತು ಮಾರ್ಗಸೂಚಿಗಳು
ನಕಲು ತಡೆಯಲು ಎನ್‌ಟಿಎ ಕಠಿಣ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಕೆಳಗಿನ ವಸ್ತುಗಳು ಪರೀಕ್ಷಾ ಕೇಂದ್ರದಲ್ಲಿ ನಿಷಿದ್ಧವಾಗಿವೆ:
-
ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ, ಮೂಗುತಿ, ಜಡೆ ಕ್ಲಿಪ್, ನತ್ತು
-
ಹೈ ಹಿಲ್ಸ್ ಚಪ್ಪಲಿ
-
ಯಾವುದೇ ಲೋಹದ ಉಪಕರಣಗಳು
-
ಪೂರ್ಣ ತೋಳಿನ ಮೇಲಂಗಿ, ದೊಡ್ಡ ಬಟನ್‌ಗಳಿರುವ ಶರ್ಟ್, ಪ್ಯಾಂಟ್
-
ಶೂ, ಸಾಕ್ಸ್
-
ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು (ಮೊಬೈಲ್, ಸ್ಮಾರ್ಟ್‌ವಾಚ್ ಇತ್ಯಾದಿ)
ವಿದ್ಯಾರ್ಥಿಗಳು ಸರಳವಾದ, ಸಾಮಾನ್ಯ ಬಟ್ಟೆಗಳನ್ನು ಧರಿಸಿ, ಕಡ್ಡಾಯ ನಿಯಮಗಳನ್ನು ಪಾಲಿಸಬೇಕು.
ಬಹುಭಾಷಾ ಪರೀಕ್ಷೆ
ನೀಟ್ ಪರೀಕ್ಷೆಯು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖವಾದ ಪರೀಕ್ಷೆಯಾಗಿದ್ದು, ಇದನ್ನು ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಪರೀಕ್ಷೆಯ ಸುಗಮ ನಿರ್ವಹಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.