ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಪದಕಗಳ ಮಳೆ: ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ-ಕಂಚು

ಅನೈತಿಕ (11)

ಗ್ಲ್ಯಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಅದ್ಭುತವಾಗಿ ಮುಂದುವರಿದಿದೆ. ಕ್ರೀಡಾಕೂಟದ 10ನೇ ದಿನ ಭಾರತ ಅಥ್ಲೆಟಿಕ್ಸ್ ಹಾಗೂ ಬಾಕ್ಸಿಂಗ್ ಎರಡೂ ವಿಭಾಗಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರಾವೆಲ್ ಬೆಳ್ಳಿ ಹಾಗೂ ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಗೆದ್ದರೆ, ಬಾಕ್ಸಿಂಗ್‌ನಲ್ಲಿ ಪ್ರೀತಿ ಪನ್ವಾರ್ ಮತ್ತು ಜಾಸ್ಮಿನ್ ಲಂಬೋರಿಯಾ ತಲಾ ಚಿನ್ನದ ಪದಕ ಗೆದ್ದು ಭಾರತದ ಖಾತೆಗೆ ಡಬಲ್ ಗೋಲ್ಡ್ ಸೇರಿಸಿದರು.

ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಚಿತ್ರಾವೆಲ್ ಆರಂಭದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ನಾಲ್ಕನೇ ಪ್ರಯತ್ನದಲ್ಲಿ 16.58 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮೊದಲ ಪ್ರಯತ್ನದಲ್ಲಿ 16.05 ಮೀಟರ್ ಹಾಗೂ ಮೂರನೇ ಪ್ರಯತ್ನದಲ್ಲಿ 16.31 ಮೀಟರ್ ಜಿಗಿದ ಅವರು, ನಾಲ್ಕನೇ ಪ್ರಯತ್ನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐದನೇ ಸ್ಥಾನದಿಂದ ನೇರವಾಗಿ ಬೆಳ್ಳಿ ಪದಕದ ಸ್ಥಾನಕ್ಕೇರಿದರು.

ಇನ್ನೊಂದೆಡೆ, ಸೆಲ್ವ ಪ್ರಭು ತಿರುಮಾರನ್ ಕೂಡ ಸ್ಥಿರ ಪ್ರದರ್ಶನ ನೀಡಿ ಭಾರತದ ಪದಕ ಬೇಟೆಗೆ ಮತ್ತೊಂದು ಯಶಸ್ಸು ಸೇರಿಸಿದರು. ಎರಡನೇ ಪ್ರಯತ್ನದಲ್ಲಿ 16.17 ಮೀಟರ್ ಜಿಗಿದ ಅವರು, ಮೂರನೇ ಸುತ್ತಿನಲ್ಲಿ 16.43 ಮೀಟರ್‌ಗೆ ಸುಧಾರಿಸಿದರು. ಕೊನೆಯ ಅತ್ಯುತ್ತಮ ಪ್ರಯತ್ನದಲ್ಲಿ 16.52 ಮೀಟರ್ ಜಿಗಿದು ಕಂಚಿನ ಪದಕ ಗೆದ್ದರು.

ಅಥ್ಲೆಟಿಕ್ಸ್‌ನಲ್ಲಿ ಎರಡು ಪದಕಗಳು ಬಂದ ಬೆನ್ನಲ್ಲೇ ಬಾಕ್ಸಿಂಗ್ ರಿಂಗ್‌ನಲ್ಲೂ ಭಾರತ ಮಿಂಚಿತು. ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ ಪನ್ವಾರ್ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ಅವರನ್ನು 5-0 ಅಂತರದಲ್ಲಿ ಮಣಿಸಿ ಚಿನ್ನದ ಪದಕ ಗೆದ್ದರು. ಕೆಲವೇ ನಿಮಿಷಗಳ ಬಳಿಕ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಉತ್ತರ ಐರ್ಲೆಂಡ್‌ನ ಮೈಕೆಲಾ ವಾಲ್ಷ್ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿ ಮತ್ತೊಂದು ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟರು.

ಈ ನಾಲ್ಕು ಪದಕಗಳೊಂದಿಗೆ ಭಾರತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತನ್ನ ಪದಕ ಬೇಟೆಯನ್ನು ಮತ್ತಷ್ಟು ಬಲಪಡಿಸಿದ್ದು, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ ಎರಡೂ ವಿಭಾಗಗಳಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿಶೇಷವಾಗಿ ಟ್ರಿಪಲ್ ಜಂಪ್‌ನಲ್ಲಿ ಒಂದೇ ಸ್ಪರ್ಧೆಯಲ್ಲಿ ಎರಡು ಪದಕಗಳು ಹಾಗೂ ಬಾಕ್ಸಿಂಗ್‌ನಲ್ಲಿ ಸತತ ಎರಡು ಚಿನ್ನದ ಸಾಧನೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

Exit mobile version