ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ಸಮರದ ನೀತಿಯಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಭಾರತ, ಚೀನಾ, ಬ್ರಿಟನ್ ಸೇರಿದಂತೆ ಸುಮಾರು 60 ದೇಶಗಳ ಆಮದು ಸರಕುಗಳ ಮೇಲೆ ಹೊಸದಾಗಿ 10% ರಿಂದ 12.5% ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಟ್ರಂಪ್ ಆಡಳಿತ ಜಾರಿಗೆ ತಂದಿದೆ.
ಹೊಸ ನೀತಿಯ ಪ್ರಕಾರ, ಕಾರ್ಮಿಕರಿಂದ ತಯಾರಿಸಲಾದ ಉತ್ಪನ್ನಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಇಲ್ಲದ ಚೀನಾ, ಜಪಾನ್ ಸೇರಿದಂತೆ ಕೆಲವು ದೇಶಗಳ ಮೇಲೆ 12.5% ರಷ್ಟು ಸುಂಕ ವಿಧಿಸಲಾಗಿದೆ. ಇತ್ತ ಭಾರತ, ಶ್ರೀಲಂಕಾ ಹಾಗೂ ಯುರೋಪಿಯನ್ ಯೂನಿಯನ್‌ನಂತಹ ದೇಶಗಳು ಇಂತಹ ಕಾನೂನುಗಳನ್ನು ಹೊಂದಿರುವುದರಿಂದ ಅಥವಾ ಜಾರಿಗೆ ತರಲು ಬದ್ಧತೆ ವ್ಯಕ್ತಪಡಿಸಿರುವುದರಿಂದ ಅವುಗಳ ಮೇಲೆ 10% ರಷ್ಟು ಸುಂಕವನ್ನು ಮಾತ್ರ ವಿಧಿಸಲಾಗಿದೆ. ಈ ನಿರ್ಧಾರದಿಂದ ಭಾರತಕ್ಕೆ ಆರಂಭದಲ್ಲಿ ನಿರೀಕ್ಷಿಸಲಾಗಿದ್ದ 12.5% ದಂಡಾತ್ಮಕ ಸುಂಕದಿಂದ ಕೊಂಚ ನಿರಾಳತೆ ದೊರೆತಿದೆ.
ಈ ಹೊಸ ಸುಂಕ ನೀತಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಮೆರಿಕದ ಸುಪ್ರೀಂ ಕೋರ್ಟ್ ಈ ಹಿಂದೆ ಟ್ರಂಪ್ ಅವರ ‘ಲಿಬರೇಶನ್ ಡೇ’ ಸುಂಕಗಳನ್ನು ಅಸಿಂಧುಗೊಳಿಸಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಜಾರಿಯಲ್ಲಿದ್ದ 10% ತೆರಿಗೆ ಅವಧಿ ಮುಗಿದ ತಕ್ಷಣ ಹೊಸ ನಿಯಮವನ್ನು ಪ್ರಕಟಿಸಲಾಗಿದೆ. ಯುಎಸ್–ಮೆಕ್ಸಿಕೋ–ಕೆನಡಾ (USMCA) ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ಬರುವ ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲದ ಆಮದುಗಳಿಗೆ ಮಾತ್ರ ಈ ಹೊಸ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಭಾರತವು ಬಲವಂತದ ಕಾರ್ಮಿಕ ಪದ್ಧತಿಯಿಂದ ತಯಾರಾಗುವ ಉತ್ಪನ್ನಗಳ ವಿರುದ್ಧ ನಿಷೇಧ ಕ್ರಮಗಳನ್ನು ಜಾರಿಗೆ ತಂದಿರುವುದು ಹಾಗೂ ಅಮೆರಿಕದೊಂದಿಗೆ ನಡೆದ ದ್ವಿಪಕ್ಷೀಯ ವ್ಯಾಪಾರ ಮಾತುಕತೆಯಲ್ಲಿ ಸಕಾರಾತ್ಮಕ ನಿಲುವು ತಾಳಿರುವುದನ್ನು ಪರಿಗಣಿಸಿ ಭಾರತದ ಮೇಲಿನ ಸುಂಕವನ್ನು 10% ಕ್ಕೆ ಸೀಮಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದರ ಜೊತೆಗೆ, ಟ್ರಂಪ್ ಆಡಳಿತವು ಮುಂಬರುವ ವಾರಗಳಲ್ಲಿ ಮತ್ತೊಂದು ಸುತ್ತಿನ ಸುಂಕಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೃತಕವಾಗಿ ಕಡಿಮೆ ಬೆಲೆಗೆ ಸರಕುಗಳನ್ನು ರಫ್ತು ಮಾಡುವ ಮತ್ತು ಉತ್ಪಾದನೆಗೆ ಅತಿಯಾದ ಸಬ್ಸಿಡಿ ನೀಡುವ ದೇಶಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈ ಹಿಂದೆ ಜೋ ಬೈಡನ್ ಆಡಳಿತವು ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಿಂದ ಆಮದಾಗುತ್ತಿದ್ದ ಸೌರ ಫಲಕಗಳು ಸೇರಿದಂತೆ ಹಲವು ಉತ್ಪನ್ನಗಳ ವಿರುದ್ಧ ಇದೇ ರೀತಿಯ ಕಠಿಣ ಕ್ರಮ ಕೈಗೊಂಡಿತ್ತು. ಉಯ್ಘರ್ ಮುಸ್ಲಿಮರನ್ನು ಬಲವಂತದ ಕಾರ್ಮಿಕರಾಗಿ ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಅದೇ ಮಾದರಿಯ ತನಿಖೆಯನ್ನು 60ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಲು ಟ್ರಂಪ್ ಆಡಳಿತ ಮುಂದಾಗಿದೆ.
ಈ ಹೊಸ ಸುಂಕಗಳನ್ನು 1974ರ ಅಮೆರಿಕದ ವ್ಯಾಪಾರ ಕಾಯ್ದೆಯ ಸೆಕ್ಷನ್ 301 ಅಡಿಯಲ್ಲಿ ವಿಧಿಸಲಾಗಿದೆ. ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾದ ಅಥವಾ ಅನ್ಯಾಯದ ವ್ಯಾಪಾರ ನೀತಿಗಳನ್ನು ಅನುಸರಿಸುವ ದೇಶಗಳ ವಿರುದ್ಧ ಸುಂಕ ವಿಧಿಸಲು ಈ ಕಾಯ್ದೆ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ. ತುರ್ತು ಪರಿಸ್ಥಿತಿ ಕಾಯ್ದೆಯಡಿ ವಿಧಿಸಿದ್ದ ಹಿಂದಿನ ಸುಂಕಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ, ನ್ಯಾಯಾಂಗದ ಮಿತಿಗಳನ್ನು ಮೀರಿ ಸುಂಕ ವ್ಯವಸ್ಥೆಯನ್ನು ಮುಂದುವರಿಸಲು ಟ್ರಂಪ್ ಆಡಳಿತ ಇದೀಗ ಸೆಕ್ಷನ್ 301ರ ಅಧಿಕಾರವನ್ನು ಬಳಸಿಕೊಂಡಿದೆ.
