ಬೆಂಗಳೂರು: ಒಂದೇ ರೂಮಿನಲ್ಲಿದ್ದ ಸ್ನೇಹಿತನ ಮೊಬೈಲ್ ಕದ್ದ ಯುವಕನೊಬ್ಬ, ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಹಣವನ್ನು ಶಾಪಿಂಗ್ ಮಾಡಿ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಕೋರಮಂಗಲದಲ್ಲಿ ನಡೆದಿದೆ
ಘಟನೆಯ ಹಿನ್ನೆಲೆ
ಕೋರಮಂಗಲದ ಪಿಜಿಯೊಂದರಲ್ಲಿ ಚಿಂತನ್ ಆರೋರಾ ಎಂಬ ಯುವಕ ತನ್ನ ಸ್ನೇಹಿತ ನವೀನ್ ಎಂಬಾತನೊಂದಿಗೆ ವಾಸವಾಗಿದ್ದ. ಕಳೆದ ಶುಕ್ರವಾರ ರಾತ್ರಿಯವರೆಗೂ ಇಬ್ಬರೂ ಒಟ್ಟಿಗೆ ಇದ್ದರು. ಅಂದು ಚಿಂತನ್ ತಡರಾತ್ರಿಯವರೆಗೆ ಮೊಬೈಲ್ ನೋಡಿ, ನಂತರ ಅದನ್ನು ತನ್ನ ಪಕ್ಕದಲ್ಲೇ ಇಟ್ಟು ಮಲಗಿದ್ದ. ಆದರೆ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ತನ್ನ ರೂಮ್‌ಮೇಟ್ ನವೀನ್ ಚಿಂತನ್ ಮೊಬೈಲ್ ಕದ್ದು ಪರಾರಿಯಾಗಿದ್ದನು.
ಆರಂಭದಲ್ಲಿ ಗೆಳೆಯ ಎಲ್ಲೋ ಹೊರಗೆ ಹೋಗಿರಬಹುದು ಎಂದು ಭಾವಿಸಿದ್ದ ಚಿಂತನ್, ನವೀನ್ ಬಾರದಿದ್ದಾಗ ಅನುಮಾನಗೊಂಡು ತನ್ನ ಬ್ಯಾಂಕ್ ಅಕೌಂಟ್ ಪರಿಶೀಲಿಸಿದ್ದಾನೆ. ಆಗ ಅಕೌಂಟ್‌ನಿಂದ ಬರೋಬ್ಬರಿ ₹4,45,870 ಹಣ ಕಡಿತವಾಗಿತ್ತು.
ಜೊತೆಗೆ ವಾಸವಾಗಿದ್ದ ಕಾರಣ ನವೀನ್‌ಗೆ ಚಿಂತನ್ ಮೊಬೈಲ್ ಲಾಕ್ ಮತ್ತು ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು ತಿಳಿದಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ನವೀನ್, ಮೊಬೈಲ್ ಕದ್ದ ತಕ್ಷಣ ಅಮೆಜಾನ್ (Amazon) ಮತ್ತು ಜೆಪ್ಟೋ (Zepto) ಅಪ್ಲಿಕೇಶನ್‌ಗಳನ್ನು ಓಪನ್ ಮಾಡಿದ್ದಾನೆ.
ಏನೇನು ಆರ್ಡರ್ ಮಾಡಿದ್ದ?
ಕದ್ದ ಮೊಬೈಲ್ ಮೂಲಕ ನವೀನ್ , ಅಮೆಜಾನ್ ಮತ್ತು ಜೆಪ್ಟೋ ಮೂಲಕ ತನಗೆ ಬೇಕಾದ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳು, ಗ್ಯಾಜೆಟ್‌ಗಳು ಮತ್ತು ದುಬಾರಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದಾನೆ. ಬಳಿಕ ಅವುಗಳನೆಲ್ಲಾ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಸದ್ಯ ಈ ವಂಚನೆಯ ಕುರಿತು ಚಿಂತನ್ ಆರೋರಾ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೀನ್ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ನೀಡಲಾದ ವಿಳಾಸ ಮತ್ತು ಬ್ಯಾಂಕ್ ವಹಿವಾಟಿನ ಜಾಡು ಹಿಡಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಡಿಜಿಟಲ್ ಯುಗದಲ್ಲಿ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ:
-
ಪಾಸ್‌ವರ್ಡ್ ಗುಪ್ತವಾಗಿರಲಿ: ಎಷ್ಟೇ ಆಪ್ತ ಗೆಳೆಯರಿದ್ದರೂ ಮೊಬೈಲ್ ಲಾಕ್ ಮತ್ತು ಯುಪಿಐ ಪಿನ್ (PIN) ಹಂಚಿಕೊಳ್ಳಬೇಡಿ.
-
ಟೂ-ಫ್ಯಾಕ್ಟರ್ ಅಥೆಂಟಿಕೇಶನ್: ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ಶಾಪಿಂಗ್ ಆಪ್‌ಗಳಿಗೆ ಹೆಚ್ಚುವರಿ ಭದ್ರತೆ ಅಳವಡಿಸಿ.
-
ಬಯೋಮೆಟ್ರಿಕ್ ಲಾಕ್: ಕೇವಲ ನಂಬರ್ ಲಾಕ್ ಬದಲು ಫೇಸ್ ಐಡಿ ಅಥವಾ ಫಿಂಗರ್ ಪ್ರಿಂಟ್ ಬಳಸಿ.





