ಬೆಂಗಳೂರು: ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್ (WhatsApp), ಈಗ ತನ್ನ ಬಳಕೆದಾರರಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ಇಷ್ಟು ದಿನ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತಿದ್ದ ಈ ಮೆಸೇಜಿಂಗ್ ಸೇವೆ, ಇನ್ನು ಮುಂದೆ ‘ಪೇಯ್ಡ್’ (Paid) ಆಗುವತ್ತ ಹೆಜ್ಜೆ ಇಡುತ್ತಿದೆ. ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ (Meta) ಸಂಸ್ಥೆಯು ವಾಟ್ಸಾಪ್ ಮೂಲಕ ಆದಾಯ ಗಳಿಸಲು ಹೊಸ ಮಾದರಿಯನ್ನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.
ವಾಟ್ಸಾಪ್‌ನಲ್ಲಿ ಈವರೆಗೆ ನಾವು ಯಾವುದೇ ಕಿರಿಕಿರಿ ಇಲ್ಲದೆ ಚಾಟ್ ಮಾಡುತ್ತಿದ್ದೆವು. ಆದರೆ ವಾಟ್ಸಾಪ್ ಶೀಘ್ರದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳನ್ನು (Ads) ಪ್ರದರ್ಶಿಸಲು ಯೋಜಿಸುತ್ತಿದೆ. ವಿಶೇಷವಾಗಿ ನಾವು ಪ್ರತಿದಿನ ನೋಡುವ ‘ಸ್ಟೇಟಸ್’ (Status) ವಿಭಾಗ ಮತ್ತು ಇತ್ತೀಚೆಗೆ ಜನಪ್ರಿಯವಾಗಿರುವ ‘ಚಾನೆಲ್ಸ್’ (Channels) ವಿಭಾಗಗಳಲ್ಲಿ ಈ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಾದರಿಯಲ್ಲೇ ಇಲ್ಲೂ ಕೂಡ ಹಣಗಳಿಕೆಯ ಹಾದಿಯನ್ನು ಮೆಟಾ ಹುಡುಕುತ್ತಿದೆ. ಒಂದು ವೇಳೆ ಬಳಕೆದಾರರಿಗೆ ಈ ಜಾಹೀರಾತುಗಳು ಬೇಡವೆಂದಾದಲ್ಲಿ, ಅವರು ‘ಪ್ರೀಮಿಯಂ ಸಬ್‌ಸ್ಕ್ರಿಪ್ಷನ್’ (Subscription) ಪಡೆದುಕೊಳ್ಳಬೇಕಾಗುತ್ತದೆ. ಅಂದರೆ, ಜಾಹೀರಾತು ಮುಕ್ತ ಅನುಭವಕ್ಕಾಗಿ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಬಹುದು.
ಈ ಹೊಸ ಚಂದಾದಾರಿಕೆ ಮಾದರಿಯ ಪರೀಕ್ಷಾರ್ಥ ಪ್ರಯೋಗಗಳು ಈಗಾಗಲೇ ಯುರೋಪ್‌ನ ಕೆಲವು ದೇಶಗಳಲ್ಲಿ ಆರಂಭವಾಗಿವೆ ಎನ್ನಲಾಗಿದೆ. ಭಾರತವು ವಾಟ್ಸಾಪ್‌ಗೆ ಅತಿದೊಡ್ಡ ಮಾರುಕಟ್ಟೆಯಾಗಿರುವುದರಿಂದ, ಇಲ್ಲಿಯೂ ಶೀಘ್ರದಲ್ಲೇ ಈ ಬದಲಾವಣೆ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ ಭಾರತೀಯ ಬಳಕೆದಾರರ ಮನಸ್ಥಿತಿಯನ್ನು ಅರಿತು ಮೆಟಾ ಸಂಸ್ಥೆಯು ಬೆಲೆಯನ್ನು ನಿಗದಿಪಡಿಸುವ ನಿರೀಕ್ಷೆಯಿದೆ.
ಯಾವೆಲ್ಲಾ ಸೇವೆಗಳು ಪೇಯ್ಡ್ ಆಗಲಿವೆ ?
ಬಳಕೆದಾರರಲ್ಲಿ ಗೊಂದಲವಿರಬಹುದು-ನಮ್ಮ ಪರ್ಸನಲ್ ಚಾಟಿಂಗ್ ಕೂಡ ಪೇಯ್ಡ್ ಆಗುತ್ತಾ ? ಎಂದು. ಸದ್ಯಕ್ಕೆ ಸಿಗುತ್ತಿರುವ ಮಾಹಿತಿಯಂತೆ:
-
ಪ್ರೀಮಿಯಂ ಫೀಚರ್‌ಗಳು: ಹೊಸದಾಗಿ ಬರಲಿರುವ ಎಐ (AI) ಆಧಾರಿತ ಸೌಲಭ್ಯಗಳು, ಸುಧಾರಿತ ಸರ್ಚ್ ಆಯ್ಕೆಗಳು ಮತ್ತು ಬಿಸಿನೆಸ್ ಪ್ರಚಾರದ ಟೂಲ್‌ಗಳಿಗೆ ಹಣ ಪಾವತಿಸಬೇಕಾಗಬಹುದು.
-
ಕ್ಲೀನ್ ಇಂಟರ್‌ಫೇಸ್: ಜಾಹೀರಾತು ರಹಿತ ಸ್ಕ್ರೀನ್ ಬೇಕಾದವರಿಗೆ ಚಂದಾದಾರಿಕೆ ಕಡ್ಡಾಯವಾಗಬಹುದು.
-
ಬಿಸಿನೆಸ್ ಅಕೌಂಟ್‌ಗಳು: ಈಗಾಗಲೇ ವಾಟ್ಸಾಪ್ ಬಿಸಿನೆಸ್ ಬಳಕೆದಾರರಿಗೆ ಕೆಲವು ಶುಲ್ಕಗಳು ಅನ್ವಯವಾಗುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ.
ಟೆಲಿಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಂತಹ ಅಪ್ಲಿಕೇಶನ್‌ಗಳು ಈಗಾಗಲೇ ಸಬ್‌ಸ್ಕ್ರಿಪ್ಷನ್ ಮಾದರಿಯನ್ನು ಅಳವಡಿಸಿಕೊಂಡಿವೆ. ಈಗ ವಾಟ್ಸಾಪ್ ಸರದಿ. ಸ್ಮಾರ್ಟ್‌ಫೋನ್ ಬಳಕೆದಾರರು ಇನ್ನು ಮುಂದೆ ತಮ್ಮ ಬಜೆಟ್‌ನಲ್ಲಿ ‘ವಾಟ್ಸಾಪ್ ಸಬ್‌ಸ್ಕ್ರಿಪ್ಷನ್’ ಮೊತ್ತಕ್ಕೂ ಜಾಗ ಮಾಡಿಕೊಡಬೇಕಾದ ಕಾಲ ಹತ್ತಿರದಲ್ಲಿದೆ.





