ನವದೆಹಲಿ: 2026ರ ವರ್ಷದ ಮೊದಲ ಸೂರ್ಯಗ್ರಹಣವು ಫೆಬ್ರವರಿ 17ರ ಮಂಗಳವಾರ ಸಂಭವಿಸಲಿದೆ. ಈ ಗ್ರಹಣವು ವಿಶೇಷವಾಗಿ ‘ರಿಂಗ್ ಆಫ್ ಫೈರ್’ (Ring of Fire) ಅಥವಾ ಕಂಕಣ ಸೂರ್ಯಗ್ರಹಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸೂರ್ಯನ ಮಧ್ಯಭಾಗವನ್ನು ಚಂದ್ರನು ಮರೆಮಾಚಿದಾಗ ಗೋಚರಹೊರಭಾಗವು ಪ್ರಕಾಶಮಾನವಾದ ಉಂಗುರದಂತೆ ಕಾಣುವುದೇ ಈ ವಿದ್ಯಮಾನದ ವಿಶೇಷತೆ.
ಗ್ರಹಣದ ಸಮಯ ಮತ್ತು ಅವಧಿ
ಖಗೋಳ ವಿಜ್ಞಾನಿಗಳ ಲೆಕ್ಕಾಚಾರದಂತೆ, ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಪ್ರಕ್ರಿಯೆಯು ಮಂಗಳವಾರ ಮಧ್ಯಾಹ್ನ ಸುಮಾರು 3:26ಕ್ಕೆ ಆರಂಭವಾಗಲಿದ್ದು, ರಾತ್ರಿ 7:57ಕ್ಕೆ ಕೊನೆಗೊಳ್ಳಲಿದೆ. ಇಡೀ ಗ್ರಹಣದ ಅವಧಿಯಲ್ಲಿ ‘ಕಂಕಣ’ ಅಥವಾ ಆ ಉಂಗುರದಂತಹ ದೃಶ್ಯವು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಅತ್ಯಂತ ಸ್ಪಷ್ಟವಾಗಿ ಗೋಚರಿಸಲಿದೆ. ಈ ಸಮಯದಲ್ಲಿ ಚಂದ್ರನು ಸೂರ್ಯನ ಕೇಂದ್ರ ಭಾಗದ ಸುಮಾರು ಶೇ. 96 ರಷ್ಟನ್ನು ಆವರಿಸಿಕೊಳ್ಳುತ್ತಾನೆ.
ಭಾರತದಲ್ಲಿ ಗೋಚರಿಸುತ್ತದೆಯೇ ?
ಗ್ರಹಣದ ವಿಷಯ ಬಂದಾಗ ಭಾರತೀಯರಲ್ಲಿ ಮೂಡುವ ಮೊದಲ ಪ್ರಶ್ನೆ ಇದು ನಮಗೆ ಕಾಣಿಸುತ್ತದೆಯೇ ? ಎಂಬುದು. ಆದರೆ, ಈ ಬಾರಿಯ ಕಂಕಣ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. ಗ್ರಹಣದ ಪಥವು ದಕ್ಷಿಣ ಗೋಳಾರ್ಧದ ಮೇಲೆ ಸಾಗುವುದರಿಂದ ಭಾರತೀಯರಿಗೆ ಈ ಅಪರೂಪದ ದೃಶ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶವಿಲ್ಲ. ಹೀಗಾಗಿ, ಗ್ರಹಣಕ್ಕೆ ಸಂಬಂಧಿಸಿದ ಸೂತಕ ಅಥವಾ ಧಾರ್ಮಿಕ ನಿಯಮಗಳು ಭಾರತದಲ್ಲಿ ಅನ್ವಯಿಸುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಎಲ್ಲೆಲ್ಲಿ ಕಾಣಿಸಲಿದೆ ಈ ಖಗೋಳ ಕೌತುಕ ?
ಈ ಬಾರಿಯ ಸೂರ್ಯಗ್ರಹಣವು ಮುಖ್ಯವಾಗಿ ದಕ್ಷಿಣ ಗೋಳಾರ್ಧದ ದೇಶಗಳಲ್ಲಿ ಕಂಡುಬರುತ್ತದೆ:
-
ಆಫ್ರಿಕಾ ಖಂಡ: ದಕ್ಷಿಣ ಆಫ್ರಿಕಾ, ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆ ದೇಶಗಳಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ.
-
ಅಂಟಾರ್ಟಿಕಾ: ಹಿಮಚ್ಛಾದಿತ ಅಂಟಾರ್ಟಿಕಾ ಖಂಡದ ಕೆಲವು ಭಾಗಗಳಲ್ಲಿ ‘ರಿಂಗ್ ಆಫ್ ಫೈರ್’ ಸಂಪೂರ್ಣವಾಗಿ ಕಾಣಿಸಲಿದೆ.
-
ಸಾಗರ ಪ್ರದೇಶ: ದಕ್ಷಿಣ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಕೆಲವು ಭಾಗಗಳಲ್ಲಿ ಆಕಾಶವೀಕ್ಷಕರು ಇದನ್ನು ವೀಕ್ಷಿಸಬಹುದಾಗಿದೆ.
ಏನಿದು ‘ರಿಂಗ್ ಆಫ್ ಫೈರ್’ (Ring of Fire)?
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ವಿವರಿಸುವಂತೆ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ, ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಅತ್ಯಂತ ದೂರದಲ್ಲಿದ್ದಾಗ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಚಂದ್ರನ ಗಾತ್ರ ಸಾಲುವುದಿಲ್ಲ. ಆಗ ಸೂರ್ಯನ ಮಧ್ಯಭಾಗ ಕಪ್ಪಾಗಿ ಕಂಡುಬಂದು, ಅಂಚುಗಳು ಮಾತ್ರ ಉರಿಯುವ ಉಂಗುರದಂತೆ ಪ್ರಕಾಶಿಸುತ್ತವೆ. ಇದನ್ನೇ ‘ಕಂಕಣ ಸೂರ್ಯಗ್ರಹಣ’ ಅಥವಾ ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ.
ಈ ಗ್ರಹಣ ಗೋಚರಿಸುವ ಪ್ರದೇಶದಲ್ಲಿರುವವರು ಎಂದಿಗೂ ಬರಿಗಣ್ಣಿನಿಂದ ಸೂರ್ಯನನ್ನು ನೋಡಬಾರದು. ಸೂರ್ಯನ ಕಿರಣಗಳು ಕಣ್ಣಿನ ರೆಟಿನಾ ಮೇಲೆ ತೀವ್ರ ಪರಿಣಾಮ ಬೀರಬಹುದು. ಆದ್ದರಿಂದ, ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಸೌರ ಫಿಲ್ಟರ್’ ಅಥವಾ ಗ್ರಹಣ ವೀಕ್ಷಣೆಗಾಗಿ ಇರುವ ವಿಶೇಷ ಕನ್ನಡಕಗಳನ್ನು ಬಳಸುವುದು ಕಡ್ಡಾಯ. ಭಾರತದಲ್ಲಿರುವವರು ನಾಸಾದ ಅಧಿಕೃತ ಯುಟ್ಯೂಬ್ ಚಾನೆಲ್ ಅಥವಾ ವಿವಿಧ ವಿಜ್ಞಾನ ವೆಬ್‌ಸೈಟ್‌ಗಳ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.





