WPL Final 2026: ಆರ್‌‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ, ಗೆಲುವು ಯಾರಿಗೆ?

ಸುಜಯೇಂದ್ರ (1)

ವಡೋದರಾ: ಮಹಿಳಾ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾಗಿರುವ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ (WPL) 2026ರ 4ನೇ ಆವೃತ್ತಿಯ ಫೈನಲ್‌ ಪಂದ್ಯಕ್ಕೆ ವಡೋದರಾದ ಮೈದಾನ ಸಜ್ಜಾಗಿದೆ. ಇಂದು ಸಂಜೆ ಮಾಜಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಸತತವಾಗಿ ಫೈನಲ್‌ ತಲುಪುವ ಸಾಧನೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಕ್ರಿಕೆಟ್‌ ಅಭಿಮಾನಿಗಳಲ್ಲಿ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

2024ರಲ್ಲಿ ಇದೇ ಡೆಲ್ಲಿ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಚೊಚ್ಚಲ ಡಬ್ಲ್ಯುಪಿಎಲ್‌ ಕಿರೀಟ ಮುಡಿಗೇರಿಸಿಕೊಂಡಿದ್ದ ಆರ್‌ಸಿಬಿ, ಈ ಬಾರಿ ಕೂಡಾ ಅದ್ಭುತ ಪ್ರದರ್ಶನದೊಂದಿಗೆ ಫೈನಲ್‌ಗೆ ಪ್ರವೇಶಿಸಿದೆ. ಲೀಗ್‌ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಬೆಂಗಳೂರು ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಆರ್‌ಸಿಬಿ ತಂಡದಲ್ಲಿ ನಾಯಕಿ ಸ್ಮೃತಿ ಮಂಧನಾ, ಗ್ರೇಸ್‌ ಹ್ಯಾರಿಸ್, ರಿಚಾ ಘೋಷ್‌ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರೂ, ಉಳಿದ ಆಟಗಾರ್ತಿಯರು ಸಮಯಕ್ಕೆ ತಕ್ಕಂತೆ ತಂಡದ ಹೊಣೆ ಹೊತ್ತರು. ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ನಿರ್ಣಾಯಕ ಕ್ಷಣಗಳಲ್ಲಿ ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್‌ ವಿಭಾಗದಲ್ಲಿ ನ್ಯಾಡಿನ್‌ ಡೆ ಕ್ಲರ್ಕ್, ಸಯಾಲಿ ಸತ್ಗಾರೆ, ಲಾರೆನ್‌ ಬೆಲ್ ಎದುರಾಳಿ ತಂಡಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಜೊತೆಗೆ ಯುವ ಪ್ರತಿಭೆ ಶ್ರೇಯಾಂಕ ಪಾಟೀಲ್‌ ನಿರ್ಣಾಯಕ ಪಂದ್ಯಗಳಲ್ಲಿ ಪ್ರಮುಖ ವಿಕೆಟ್‌ ಕಿತ್ತು ತಂಡದ ಗೆಲುವಿಗೆ ನೆರವಾಗಿದ್ದಾರೆ.

ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಟೂರ್ನಿಯಲ್ಲಿ ಏರುಪೇರು ಪ್ರದರ್ಶನ ನೀಡಿದರೂ, ಮಹತ್ವದ ಹಂತದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದೆ. ಲೀಗ್‌ ಹಂತದಲ್ಲಿ 8 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿದ ಡೆಲ್ಲಿ, ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು ಸೋಲಿಸಿ ಫೈನಲ್‌ಗೆ ದಾರಿ ಕಂಡುಕೊಂಡಿತು. ಇದು ಡೆಲ್ಲಿ ತಂಡದ ಸತತ 4ನೇ ಫೈನಲ್‌ ಪ್ರವೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡೆಲ್ಲಿ ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಅನುಭವದಿಂದ ಕೂಡಿದೆ. ಲಿಜೆಲ್‌ ಲೀ, ಲಾರಾ ವೊಲ್ವಾರ್ಟ್‌ ಉತ್ತಮ ಫಾರ್ಮ್‌ನಲ್ಲಿದ್ದು, ಶಫಾಲಿ ವರ್ಮಾ ಮತ್ತು ನಾಯಕಿ ಜೆಮಿಮಾ ರೋಡ್ರಿಗ್ಸ್‌ ಒಂದೇ ಪಂದ್ಯದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ನಿರ್ಣಾಯಕ ಹಂತಗಳಲ್ಲಿ ಕೆಲ ಆಟಗಾರ್ತಿಯರ ವೈಫಲ್ಯ ಡೆಲ್ಲಿಗೆ ತಲೆನೋವಾಗಿದೆ.

ಬೌಲಿಂಗ್‌ನಲ್ಲಿ ಡೆಲ್ಲಿ ತಂಡ ಶಕ್ತಿಶಾಲಿಯಾಗಿದೆ. ನಂದಿನಿ ಶರ್ಮಾ 9 ಪಂದ್ಯಗಳಲ್ಲಿ 16 ವಿಕೆಟ್‌ ಕಿತ್ತು ಟೂರ್ನಿಯ ಪ್ರಮುಖ ಬೌಲರ್‌ಗಳಲ್ಲೊಬ್ಬರಾಗಿದ್ದಾರೆ. ಶ್ರೀ ಚರಣಿ 14 ವಿಕೆಟ್‌, ಮಾರಿಜಾನ್‌ ಕಾಪ್‌ 10 ವಿಕೆಟ್‌ ಹಾಗೂ ಶಿನೆಲ್‌ ಹೆನ್ರಿ 12 ವಿಕೆಟ್‌ಗಳೊಂದಿಗೆ ಬೌಲಿಂಗ್‌ ದಾಳಿ ಮುನ್ನಡೆಸಿದ್ದಾರೆ. ಈ ಬೌಲಿಂಗ್‌ ಪಡೆ ಆರ್‌ಸಿಬಿ ಬ್ಯಾಟಿಂಗ್‌ ಕ್ರಮಾಂಕಕ್ಕೆ ದೊಡ್ಡ ಸವಾಲು ಎಸೆಯಲಿದೆ.

ಈ ಫೈನಲ್‌ ಪಂದ್ಯ ಆರ್‌ಸಿಬಿ ಫ್ರಾಂಚೈಸಿಗೆ ವಿಶೇಷ ಮಹತ್ವ ಹೊಂದಿದೆ. 2024ರಲ್ಲಿ ಮಹಿಳಾ ತಂಡ ಹಾಗೂ 2025ರಲ್ಲಿ ಪುರುಷರ ತಂಡ ಚಾಂಪಿಯನ್‌ ಆಗಿದ್ದರಿಂದ, ಈ ಬಾರಿ ಮಹಿಳಾ ತಂಡ ಗೆದ್ದರೆ ಫ್ರಾಂಚೈಸಿಗೆ ಹ್ಯಾಟ್ರಿಕ್‌ ಟ್ರೋಫಿ ಸಾಧನೆಯ ಕನಸು ನನಸಾಗಲಿದೆ.

ಪಂದ್ಯ ಆರಂಭ: ಸಂಜೆ 7.30 ಗಂಟೆಗೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಜಿಯೋ ಹಾಟ್‌ಸ್ಟಾರ್‌

ಕ್ರಿಕೆಟ್‌ ಅಭಿಮಾನಿಗಳು ಇಂದು ವಡೋದರಾದಲ್ಲಿ ರೋಚಕ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಗೆಲುವು ಯಾರಿಗೆ? ಉತ್ತರ ಮೈದಾನದಲ್ಲಿ ಸಿಗಲಿದೆ.

Exit mobile version