ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ 18 ವರ್ಷಗಳ ಐಪಿಎಲ್ ಪಯಣದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದು, ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳ ಕನಸನ್ನು ನನಸಾಗಿಸಿದೆ. ಆರ್‌ಸಿಬಿಯ ಈ ಐತಿಹಾಸಿಕ ಗೆಲುವು ರಾಜ್ಯದಾದ್ಯಂತ ಸಂಭ್ರಮದ ಅಲೆಯನ್ನೇ ಎಬ್ಬಿಸಿದೆ. ಫ್ರಾಂಚೈಸಿಯ ಈ ಗೆಲುವು ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಅಭಿಮಾನಿಗಳ ಹೃದಯದಲ್ಲೂ ಚಿರಸ್ಥಾಯಿಯಾಗಿದೆ. ಆದರೆ, ಈ ಯಶಸ್ಸಿನ ಹಿಂದಿನ ಶಕ್ತಿ ಯಾರು? ಆರ್‌ಸಿಬಿಯ ಮಾಲೀಕರು ಯಾರೆಂಬುದನ್ನು ತಿಳಿಯೋಣ.
ಆರ್‌ಸಿಬಿ 2008ರಲ್ಲಿ ಐಪಿಎಲ್‌ನ ಉದ್ಘಾಟನಾ ಆವೃತ್ತಿಯೊಂದಿಗೆ ಸ್ಥಾಪನೆಯಾಯಿತು. ಕರ್ನಾಟಕವನ್ನು ಪ್ರತಿನಿಧಿಸುವ ಈ ಫ್ರಾಂಚೈಸಿಯನ್ನು ಆರಂಭದಲ್ಲಿ ವಿಜಯ್ ಮಲ್ಯ ಖರೀದಿಸಿದ್ದರು. ಕಿಂಗ್ ಫಿಶರ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ ಮಲ್ಯ, 111.6 ಮಿಲಿಯನ್ ಡಾಲರ್‌ಗೆ ಆರ್‌ಸಿಬಿಯನ್ನು ತಮ್ಮದಾಗಿಸಿಕೊಂಡರು. ಇದು ಐಪಿಎಲ್‌ನಲ್ಲಿ ಅತಿ ಹೆಚ್ಚು ಬಿಡ್ ಮೊತ್ತದ ಫ್ರಾಂಚೈಸಿಯಾಗಿತ್ತು. ಆದರೆ, ಸಾಲದ ಸಂಕಷ್ಟಕ್ಕೆ ಸಿಲುಕಿದ ಮಲ್ಯ, ತಮ್ಮ ಮಾಲೀಕತ್ವವನ್ನು ಕಳೆದುಕೊಂಡರು. ಇದೀಗ, ಆರ್‌ಸಿಬಿ ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಒಡೆತನದಲ್ಲಿದೆ. 2022ರ ವೇಳೆಗೆ, ಆರ್‌ಸಿಬಿ ಐಪಿಎಲ್‌ನ ಮೂರನೇ ಶ್ರೀಮಂತ ಫ್ರಾಂಚೈಸಿಯಾಗಿ ಮೆರೆಯಿತು. ಪ್ರಥಮೇಶ್ ಮಿಶ್ರಾ ಆರ್‌ಸಿಬಿಯ ಅಧ್ಯಕ್ಷರಾಗಿದ್ದಾರೆ. ಆದರೆ ಯುನೈಟೆಡ್ ಸ್ಪಿರಿಟ್ಸ್‌ನ ಸಿಇಓ ಹಿನಾ ನಾಗರಾಜ್, ಫ್ರಾಂಚೈಸಿಯ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ವಿಶ್ವದ ಎರಡನೇ ಅತಿದೊಡ್ಡ ಸ್ಪಿರಿಟ್ ಉತ್ಪಾದಕ ಕಂಪನಿಯಾಗಿದೆ. ಡಿಯಾಜಿಯೊದ ಅಂಗಸಂಸ್ಥೆಯಾಗಿರುವ USL, ಜಾಗತಿಕ ಆಲ್ಕೋಹಾಲ್ ಪಾನೀಯ ಉದ್ಯಮದಲ್ಲಿ ದೈತ್ಯವಾಗಿದೆ. ಈ ಕಂಪನಿಯು ಆರ್‌ಸಿಬಿಯ ಆರ್ಥಿಕ ಶಕ್ತಿಯನ್ನು ಬಲಪಡಿಸಿದ್ದು, ಫ್ರಾಂಚೈಸಿಯನ್ನು ಐಪಿಎಲ್‌ನ ಶಕ್ತಿಶಾಲಿ ತಂಡವಾಗಿ ರೂಪಿಸಿದೆ. USLನ ನಾಯಕತ್ವದಲ್ಲಿ, ಆರ್‌ಸಿಬಿ ತಂಡದ ಬ್ರಾಂಡ್ ಮೌಲ್ಯವು ಗಗನಕ್ಕೇರಿದೆ.
18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, 2025ರ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ತನ್ನ ಮೊದಲ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಈ ಗೆಲುವು ತಂಡದ ಆಟಗಾರರ ಶ್ರಮ, ತಂತ್ರಗಾರಿಕೆ, ಮತ್ತು ಅಭಿಮಾನಿಗಳ ಅಚಲ ಬೆಂಬಲದ ಫಲವಾಗಿದೆ. ಇದೇ ರೀತಿ, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (WPL) ಸ್ಮೃತಿ ಮಂದಾನಾ ನೇತೃತ್ವದ ಆರ್‌ಸಿಬಿ ತಂಡವು 2024ರಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.