ಲಂಡನ್: ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಕ್ರಿಕೆಟ್ (WCL 2025) ಟೂರ್ನಮೆಂಟ್‌ನಲ್ಲಿ ಭಾನುವಾರ ರಾತ್ರಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ, ಭಾರತೀಯ ಆಟಗಾರರು ಈ ಪಂದ್ಯದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಈ ದಿಟ್ಟ ನಿರ್ಧಾರಕ್ಕೆ ದೇಶಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರದಿಂದಲೇ ಭಾರತದ ಕೆಲವು ಪ್ರಮುಖ ಆಟಗಾರರು ಈ ಪಂದ್ಯದಿಂದ ಹಿಂದೆ ಸರಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಸ್ಪಿನ್ನರ್ ಹರ್ಭಜನ್ ಸಿಂಗ್, ಆರಂಭಿಕ ಆಟಗಾರ ಶಿಖರ್ ಧವನ್, ಸುರೇಶ್ ರೈನಾ, ಆಲ್‌ರೌಂಡರ್ ಯೂಸುಫ್ ಪಠಾಣ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶವೂ ವ್ಯಕ್ತವಾಗಿತ್ತು.
ಸಂಘಟಕರು ತಮ್ಮ ಅಧಿಕೃತ ಹೇಳಿಕೆಯಲ್ಲಿ, “ನಾವು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇವೆ. ಆದರೆ, ಈ ಪ್ರಕ್ರಿಯೆಯಲ್ಲಿ ನಾವು ಅನೇಕರ ಭಾವನೆಗಳನ್ನು ನೋಯಿಸಿದ್ದೇವೆ ಎಂಬುದನ್ನು ಅರಿತಿದ್ದೇವೆ. ದೇಶಕ್ಕೆ ಕೀರ್ತಿ ತಂದಿರುವ ಭಾರತೀಯ ಕ್ರಿಕೆಟ್ ದಿಗ್ಗಜರಿಗೆ ತೊಂದರೆಯಾಗಿದೆ ಮತ್ತು ನಮ್ಮನ್ನು ಬೆಂಬಲಿಸಿದ ಬ್ರ್ಯಾಂಡ್‌ಗಳ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ, ಭಾರತ-ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ಯುವರಾಜ್ ಸಿಂಗ್ (ನಾಯಕ), ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಯೂಸುಫ್ ಪಠಾಣ್, ನಮನ್ ಓಜಾ, ಮುನಾಫ್ ಪಟೇಲ್, ರತೀಂದರ್ ಸಿಂಗ್ ಸೋಧಿ, ಆರ್.ಪಿ. ಸಿಂಗ್ ಮತ್ತು ಅಶೋಕ್ ದಿಂಡಾ ಅವರಿಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ಆಟಗಾರರು ಕೇವಲ ಕ್ರಿಕೆಟ್‌ಗೆ ಸೀಮಿತವಾಗದೆ, ರಾಷ್ಟ್ರೀಯ ಭಾವನೆಗೆ ಗೌರವ ಸೂಚಿಸಿದ್ದಾರೆ.