ಬಿಸಿಲಿನ ಬೇಗೆಯಿಂದ ಬೆಂದ ಕರ್ನಾಟಕಕ್ಕೆ ಗುಡ್ ನ್ಯೂಸ್! ಈ ಭಾಗಗಳಲ್ಲಿ ಇಂದೇ ಮಳೆಯ ಸಂಭವ

BeFunky collage (84)

ಕರ್ನಾಟಕದಲ್ಲಿ ತೀವ್ರ ಬಿಸಿಲು ಮತ್ತು ಬಿಸಿಗಾಳಿಯಿಂದ ಜನರು ಬಳಲುತ್ತಿರುವ ನಡುವೆ ಒಳ್ಳೆಯ ಸುದ್ದಿ ಬಂದಿದೆ. ಮಲೆನಾಡಿನ ಗಾಳಿಯ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಅಥವಾ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಏಪ್ರಿಲ್ 25ರಿಂದ ಒಳನಾಡು ಮತ್ತು 26ರಿಂದ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಬೇಸಿಗೆ ಮಳೆ ಆರಂಭವಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಸ್ತುತ ಕರ್ನಾಟಕದಲ್ಲಿ ಬಿಸಿಲು ತೀವ್ರವಾಗಿದೆ. ಉತ್ತರ ಕರ್ನಾಟಕದ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮೋಡ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿದೆ. ಆದರೆ ಸಂಜೆ ವೇಳೆ ಮಲೆನಾಡಿನಿಂದ ಬೀಸುವ ತಂಪು ಗಾಳಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಘಟ್ಟ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಅಥವಾ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆ: ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಏಪ್ರಿಲ್ 26ರಿಂದ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬೇಸಿಗೆ ಮಳೆ ಮುಂದುವರಿಯುವ ಲಕ್ಷಣಗಳಿವೆ.

ದಕ್ಷಿಣ ಒಳನಾಡು: ಮೈಸೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಏಪ್ರಿಲ್ 25ರಿಂದ ಇಲ್ಲಿ ಮಳೆ ಆರಂಭವಾಗುವ ಸೂಚನೆಗಳಿವೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡದ ವಾತಾವರಣ ಇರಬಹುದು.

ಬೆಂಗಳೂರು ಹವಾಮಾನ: ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ರಿಂದ 2.6 ಡಿಗ್ರಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ 36.2 ರಿಂದ 36.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಂದು ಅಲ್ಲಲ್ಲಿ ಮೋಡಕವಿದ ವಾತಾವರಣ ಮತ್ತು ಸಂಜೆ ತುಂತುರು ಮಳೆಯ ಸಾಧ್ಯತೆ ಇದೆ.

ಅರಬ್ಬಿ ಸಮುದ್ರದಿಂದ ಬೀಸುವ ಪ್ರಬಲ ಗಾಳಿ ಮತ್ತು ದಕ್ಷಿಣದಿಂದ ಬರುವ ಗಾಳಿ ಮೋಡಗಳನ್ನು ಉತ್ತರಕ್ಕೆ ಕೊಂಡೊಯ್ಯುತ್ತಿವೆ. ಈ ಪರಿಸ್ಥಿತಿ ಬದಲಾದರೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯಿಂದ ಕೆಲವು ನಿರಾಳತೆ ಸಿಗುವ ನಿರೀಕ್ಷೆಯಿದೆ. ಜನರು ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಮತ್ತು ಮಳೆಯ ಸಂದರ್ಭದಲ್ಲಿ ಜಾಗರೂಕತೆ ವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Exit mobile version