ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 10ಕ್ಕೂ ಹೆಚ್ಚು ಅಗತ್ಯ ವಸ್ತು-ಸೇವೆಗಳ ದರ ಏರಿಕೆ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಗೆ ಭಾರೀ ಹಿನ್ನಡೆ (1)

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರು ಬಳಸುವ ಹಲವು ಅಗತ್ಯ ವಸ್ತುಗಳು ಮತ್ತು ಸೇವೆಗಳ ದರಗಳಲ್ಲಿ ಏರಿಕೆಯಾಗಿದೆ. ಹಾಲು, ಮೊಸರು, ಬಸ್ ಪ್ರಯಾಣ, ವಿದ್ಯುತ್, ಮೆಟ್ರೋ, ಇಂಧನ, ಮದ್ಯ, ಆಸ್ತಿ ನೋಂದಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಲೆ ಮತ್ತು ಶುಲ್ಕ ಹೆಚ್ಚಳವಾಗಿರುವುದು ಕುಟುಂಬಗಳ ಮಾಸಿಕ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ.

ಹಾಲು, ಮೊಸರಿನ ದರ ಏರಿಕೆ

ನಂದಿನಿ ಹಾಲಿನ ದರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಬದಲಾವಣೆ ಮಾಡಲಾಗಿದೆ. 2023ರ ಜುಲೈನಲ್ಲಿ ಲೀಟರ್‌ಗೆ 39 ರೂಪಾಯಿ ಇದ್ದ ಟೋನ್ಡ್ ಹಾಲಿನ ದರವನ್ನು ಆಗಸ್ಟ್‌ನಿಂದ 42 ರೂಪಾಯಿಗೆ ಹೆಚ್ಚಿಸಲಾಗಿತ್ತು. ಬಳಿಕ 2024ರ ಜೂನ್‌ನಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. 2025ರ ಮಾರ್ಚ್‌ನಲ್ಲಿ ಮತ್ತೆ ಲೀಟರ್‌ಗೆ 4 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇತ್ತೀಚಿನ 2026ರ ನವೆಂಬರ್‌ನ ಪರಿಷ್ಕರಣೆಯಲ್ಲಿ ನೀಲಿ ಪ್ಯಾಕೆಟ್ ಹಾಲಿನ ದರ 46 ರೂಪಾಯಿಯಿಂದ 54 ರೂಪಾಯಿಗೆ ಏರಿಕೆಯಾಗಿದೆ. ಮೊಸರು ಸೇರಿದಂತೆ ಹಾಲಿನ ಇತರ ಉತ್ಪನ್ನಗಳ ದರವೂ ಹೆಚ್ಚಳವಾಗಿದೆ.

ಬಸ್ ಪ್ರಯಾಣ, ಮೆಟ್ರೋ ದರದಲ್ಲೂ ಏರಿಕೆ

ಸಾರ್ವಜನಿಕ ಸಾರಿಗೆ ಪ್ರಯಾಣಿಕರಿಗೂ ದರ ಏರಿಕೆಯ ಬಿಸಿ ತಟ್ಟಿದೆ. ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು 2025ರ ಜನವರಿಯಲ್ಲಿ ಶೇ.15ರಷ್ಟು ಹೆಚ್ಚಿಸಲಾಗಿತ್ತು. ಇದೀಗ 2026ರ ನವೆಂಬರ್ 5ರಿಂದ ಮತ್ತೊಂದು ದರ ಪರಿಷ್ಕರಣೆ ಜಾರಿಗೆ ತಂದಿದೆ . ಸಾರಿಗೆ ದರ ನಿಯಂತ್ರಣ ಸಮಿತಿ ಮೂರು ಸಾರಿಗೆ ನಿಗಮಗಳಿಗೆ ಶೇ.25ರಷ್ಟು ಮತ್ತು ಬಿಎಂಟಿಸಿಗೆ ಶೇ.40ರಷ್ಟು ಹೆಚ್ಚಳ ಶಿಫಾರಸು ಮಾಡಿದೆ. ಈ ದರವನ್ನು ನವೆಂಬರ್ 4ರಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. 

ಇನ್ನು ನಮ್ಮ ಮೆಟ್ರೋ ಪ್ರಯಾಣದ ಗರಿಷ್ಠ ಟಿಕೆಟ್ ದರವೂ 60 ರೂಪಾಯಿಯಿಂದ 95 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಪ್ರತಿದಿನ ಮೆಟ್ರೋ ಬಳಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಾಗಿದೆ.

ವಿದ್ಯುತ್, ಇಂಧನ, ಮದ್ಯ ಮತ್ತು ಆಸ್ತಿ ನೋಂದಣಿ

2024ರ ಜೂನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿತ್ತು. ವಿದ್ಯುತ್ ದರ ಪರಿಷ್ಕರಣೆ, ಆಸ್ತಿ ಮಾರ್ಗಸೂಚಿ ಮೌಲ್ಯ ಮತ್ತು ನೋಂದಣಿ ಶುಲ್ಕದ ಹೆಚ್ಚಳವೂ ಮನೆ ನಿರ್ಮಾಣ ಹಾಗೂ ಆಸ್ತಿ ಖರೀದಿದಾರರ ವೆಚ್ಚವನ್ನು ಹೆಚ್ಚಿಸಿದೆ.

ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ ಎರಡು ಬಾರಿ ಬದಲಾವಣೆ ಮಾಡಲಾಗಿದ್ದು, ಕೆಲವು ವರ್ಗಗಳ ಮದ್ಯದ ಬೆಲೆ ಏರಿಕೆಯಾಗಿದೆ. ಹೊಸ ವಾಹನಗಳ ನೋಂದಣಿ ಸಂದರ್ಭದಲ್ಲಿ ರಸ್ತೆ ತೆರಿಗೆ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ. ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲಿ ಶೇ.15ರಷ್ಟು ಹೆಚ್ಚಳ, ನೀರು ಸರಬರಾಜು ಶುಲ್ಕ, ಕಸದ ತೆರಿಗೆ ಹಾಗೂ ವಿವಿಧ ಪ್ರಮಾಣಪತ್ರಗಳ ಸೇವಾ ಶುಲ್ಕಗಳ ಪರಿಷ್ಕರಣೆಯೂ ಜನರ ಖರ್ಚಿಗೆ ಸೇರ್ಪಡೆಯಾಗಿದೆ.

ತೆರಿಗೆ ಆದಾಯದ ಗುರಿ 2.20 ಲಕ್ಷ ಕೋಟಿ ರೂಪಾಯಿ

ಇನ್ನೊಂದೆಡೆ, ರಾಜ್ಯ ಸರ್ಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ ಸ್ವಂತ ತೆರಿಗೆ ಆದಾಯದ ಗುರಿಯನ್ನು 2.20 ಲಕ್ಷ ಕೋಟಿ ರೂಪಾಯಿಗೆ ನಿಗದಿಪಡಿಸಿದೆ. ರಾಜ್ಯ ಜಿಎಸ್‌ಟಿ ಮೂಲಕ 91 ಸಾವಿರ ಕೋಟಿ ರೂಪಾಯಿ, ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ರೂಪಾಯಿ ಹಾಗೂ ಪೆಟ್ರೋಲ್–ಡೀಸೆಲ್ ಮಾರಾಟ ತೆರಿಗೆ ಸೇರಿದಂತೆ ಮಾರಾಟ ತೆರಿಗೆ/ವ್ಯಾಟ್ ಮೂಲಕ 32,400 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ 29 ಸಾವಿರ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

 

Exit mobile version