KKR vs RCB: ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ

Untitled design 2025 03 23t114752.486

ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಭರ್ಜರಿ ಜಯವನ್ನು ಸಾಧಿಸಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಅವರದ್ದೇ ತವರಿನ ಮೈದಾನದಲ್ಲಿ ಗೆಲುವು ದಾಖಲಿಸಿ, 18ನೇ ಆವೃತ್ತಿಗೆ ಅದ್ಧೂರಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದು, ಈಡನ್ ಗಾರ್ಡನ್ಸ್‌ನಲ್ಲಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.

ಪಂದ್ಯದ ಸಂದರ್ಭ ಒಂದು ವಿಚಿತ್ರ ಘಟನೆ ಕೂಡಾ ನಡೆದಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅಭಿಮಾನಿಯೊಬ್ಬ ಮೈದಾನದ ಭದ್ರತೆಯನ್ನು ಉಲ್ಲಂಘಿಸಿ, ನೇರವಾಗಿ ಪಿಚ್‌ಗೆ ನುಗ್ಗಿ ಬಂದಿದ್ದಾರೆ. 13ನೇ ಓವರ್ ವೇಳೆ ಈ ಘಟನೆ ನಡೆದಿದ್ದು, ಆತ ತನ್ನ ಆರಾಧ್ಯ ಕ್ರಿಕೆಟ್ ತಾರೆಯಾದ ಕೊಹ್ಲಿಯನ್ನು ನೋಡಲು ಬಂದಿದ್ದಾನೆ. ಕೊಹ್ಲಿ ಕಾಲಿಗೆ ಬಿದ್ದು ಅವರನ್ನು ತಬ್ಬಿಕೊಂಡಿದ್ದು, ನಂತರ ಆ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ತಕ್ಷಣ ಹಿಡಿದು ಮೈದಾನದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಈ ಸಂದರ್ಭ ವಿರಾಟ್ ಕೊಹ್ಲಿ ತಾನು ತಬ್ಬಿಕೊಂಡ ಅಭಿಮಾನಿಗೆ ಸ್ನೇಹಭಾವದಿಂದ ವರ್ತಿಸಿ, ಭದ್ರತಾ ಸಿಬ್ಬಂದಿ ಅವರ ಕರ್ತವ್ಯಕ್ಕೆ ಬದ್ಧರಾಗಿದ್ದರು. ಅಭಿಮಾನಿಯನ್ನು ಮೈದಾನದ ಹೊರಗೆ ಕರೆದೊಯ್ಯುವಾಗ, ಕೊಹ್ಲಿ ಭದ್ರತಾ ಸಿಬ್ಬಂದಿಗೆ ‘ಅವನಿಗೆ ತೊಂದರೆ ಕೊಡಬೇಡಿ’ ಎಂದು ವಿನಂತಿಸಿದರು. ಕೊಹ್ಲಿಯ ತೋರಿಸಿದ ಈ ಪ್ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ.

ಪಂದ್ಯದ ಸಮಯದಲ್ಲಿ ಕೆಕೆಆರ್‌ನ ತವರು ಮೈದಾನವಾದರೂ, ಆರ್‌ಸಿಬಿ ಅಭಿಮಾನಿಗಳದ್ದೇ ಸದ್ದು ಮಾಡಿತ್ತು. ‘ಆರ್‌ಸಿಬಿ, ಆರ್‌ಸಿಬಿ’ ಎಂಬ ಘೋಷಣೆಗಳು ಮೈದಾನವನ್ನು ತುಂಬಿ ಹರಿದು, ಪಂದ್ಯವನ್ನೇ ಬಣ್ಣದಾಯಕವನ್ನಾಗಿ ಮಾಡಿತು. ಐಪಿಎಲ್‌ನ 18ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಕೊಹ್ಲಿಯ ಜೆರ್ಸಿ ಸಂಖ್ಯೆಯಾದ 18ರ ಮಹತ್ವ ಕೂಡಾ ಅನೇಕರ ಗಮನ ಸೆಳೆಯಿತು.

ಪಂದ್ಯದ ವಿವರಗಳಿಗೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 174 ರನ್‌ಗಳ ಮೊತ್ತವನ್ನು ಖಾತೆಗೆ ಸೇರಿಸಿಕೊಂಡಿತು. ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡವು 16.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್‌ಗಳನ್ನು ಬಾರಿಸಿ ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಪವರ್‌ಪ್ಲೇನಲ್ಲಿ 75ಕ್ಕೂ ಹೆಚ್ಚು ರನ್‌ಗಳನ್ನು ಸಿಡಿಸಿ, ತಂಡಕ್ಕೆ ಉತ್ತಮ ಪ್ರಾರಂಭ ಒದಗಿಸಿದರು. ಫಿಲ್ ಸಾಲ್ಟ್ 31 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿದ್ದು, ತನ್ನ ಐಪಿಎಲ್‌ ನಲ್ಲಿ ಉತ್ತಮ ಆರಂಭವನ್ನಾಗಿಸಿದೆ.

ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ 16 ಎಸೆತಗಳಲ್ಲಿ 34 ರನ್‌ಗಳನ್ನು ಕಲೆ ಹಾಕಿ, ತಂಡದ ಗೆಲುವಿಗೆ ಪೂರಕವಾದ ಆಟವಾಡಿದರು. ಬೌಲಿಂಗ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಅವರು 29 ರನ್‌ಗಳನ್ನು ನೀಡಿ, 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಿಂಚಿದರು. ಅವರ ಈ ಪರಿಣಾಮಕಾರಿ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ವಿರಾಟ್ ಕೊಹ್ಲಿಯು ತನ್ನ ಆಟದ ಮೂಲಕ ಮಾತ್ರವಲ್ಲ, ತನ್ನ ಅಭಿಮಾನಿಗಳ ಜೊತೆಗಿನ ಅನನ್ಯ ಬಾಂಧವ್ಯದಿಂದಲೂ ಜನಮನ ಗೆದ್ದಿದ್ದಾರೆ. 

Exit mobile version