ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷವು ಈಗ ಭಾರತದ ಮೇಲೂ ಪ್ರಭಾವ ಬಿರುತ್ತಿದೆ. ಈ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ದೇಶದಲ್ಲಿ ಇಂಧನ ಬೆಲೆ ಏರಿಕೆಯ ಆತಂಕ ಹೆಚ್ಚಾಗಿದೆ. ಅದರ ಜೊತೆಗೆ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯ ಸಮಸ್ಯೆ ತೀವ್ರವಾಗುತ್ತಿರುವುದು ಜನಜೀವನ ಹಾಗೂ ವಿವಿಧ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಸಂಕಷ್ಟದ ಪರಿಣಾಮ ಇದೀಗ ದೇಶದ ದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 2026 ಆರಂಭದ ಮೇಲೂ ಬೀಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಮೂಡಿದೆ. ಇದೇ ಸಂದರ್ಭದಲ್ಲಿ ದೇಶದ ಹಲವೆಡೆ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದೆ. ಇತ್ತೀಚೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸುಮಾರು 115 ರೂಪಾಯಿ ಏರಿಕೆ ಕಂಡುಬಂದಿದೆ. ಇದರಿಂದಾಗಿ ವಿಶೇಷವಾಗಿ ಹೋಟೆಲ್ ಮತ್ತು ಆಹಾರ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಎಲ್‌ಪಿಜಿ ಕೊರತೆಯಿಂದಾಗಿ ಹಲವಾರು ನಗರಗಳಲ್ಲಿ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ಮಹಾನಗರಗಳಲ್ಲಿ ಹೋಟೆಲ್ ಸಂಘಗಳು ತಮ್ಮ ಬಳಿ ಕೇವಲ ಒಂದು ಅಥವಾ ಎರಡು ದಿನಗಳಿಗೆ ಸಾಕಾಗುವಷ್ಟು ಮಾತ್ರ ಗ್ಯಾಸ್ ಉಳಿದಿದೆ ಎಂದು ಆತಂಕ ವ್ಯಕ್ತಪಡಿಸಿವೆ. ಈ ಪರಿಸ್ಥಿತಿ ಮುಂದುವರಿದರೆ ಹೋಟೆಲ್‌ಗಳು ಕಾರ್ಯಾಚರಣೆ ಕಡಿಮೆ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಕೆಲವೆಡೆ ಹೋಟೆಲ್‌ಗಳು ಈಗಾಗಲೇ ತಮ್ಮ ಮೆನುಗಳನ್ನು ಸೀಮಿತಗೊಳಿಸಲು ಆರಂಭಿಸಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ದೇಶದ ಅತಿ ದೊಡ್ಡ ಕ್ರಿಕೆಟ್ ಟೂರ್ನಮೆಂಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಆರಂಭದ ಮೇಲೂ ಅನುಮಾನ ಮೂಡಿದೆ. ಈ ಬಾರಿ ಐಪಿಎಲ್ ಮಾರ್ಚ್ 28 ರಂದು ಆರಂಭವಾಗಬೇಕಿದೆ. ಆದರೆ ಇದುವರೆಗೆ ಟೂರ್ನಮೆಂಟ್‌ನ ಸಂಪೂರ್ಣ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟವಾಗಿಲ್ಲ. ಇದಕ್ಕೆ ಹಲವು ಕಾರಣಗಳಿದ್ದು, ಪ್ರಮುಖವಾಗಿ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳು ವೇಳಾಪಟ್ಟಿ ಪ್ರಕಟಣೆಯಲ್ಲಿ ವಿಳಂಬಕ್ಕೆ ಕಾರಣವಾಗಿವೆ ಎಂದು ತಿಳಿದುಬಂದಿದೆ.
ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಪೂರೈಕೆ ಸಮಸ್ಯೆಯನ್ನು ಗಮನದಿಂದ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. “ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಸ್ಥಿತಿ ಪ್ರತಿದಿನವೂ ಬದಲಾಗುತ್ತಿದೆ. ಆದ್ದರಿಂದ ಈಗಲೇ ಯಾವುದೇ ಖಚಿತ ನಿರ್ಧಾರ ಹೇಳಲು ಸಾಧ್ಯವಿಲ್ಲ. ಐಪಿಎಲ್ ಆರಂಭದ ವೇಳೆಗೆ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಗಮನಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಇದರ ನಡುವೆಯೇ ಹಲವು ಐಪಿಎಲ್ ಫ್ರಾಂಚೈಸಿಗಳು ತಮ್ಮ ಅಭ್ಯಾಸ ಶಿಬಿರಗಳನ್ನು ಈಗಾಗಲೇ ಪ್ರಾರಂಭಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತಯಾರಿಯನ್ನು ಆರಂಭಿಸಿದೆ. ಅದೇ ರೀತಿ ರಾಜಸ್ಥಾನ ರಾಯಲ್ಸ್ ತಂಡವೂ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಪಂಜಾಬ್ ಕಿಂಗ್ಸ್ ತಂಡ ಕಳೆದ ಕೆಲವು ದಿನಗಳಿಂದ ಧರ್ಮಶಾಲಾದಲ್ಲಿ ಶಿಬಿರ ಹೂಡಿ ತಯಾರಿ ನಡೆಸುತ್ತಿದೆ. ಈ ಶಿಬಿರದಲ್ಲಿ ಸುಮಾರು 10ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿರುವುದು ತಿಳಿದುಬಂದಿದೆ.
