IPL 2026: ಚಾರ್ಟರ್ಡ್ ವಿಮಾನ ವದಂತಿಗೆ ನಗುವಲ್ಲೇ ಸ್ಪಷ್ಟನೆ ನೀಡಿದ ಕಿಂಗ್‌ ಕೊಹ್ಲಿ

Untitled design 2026 03 22T175350.041

ಐಪಿಎಲ್ 2026 ಆರಂಭಕ್ಕೂ ಮುನ್ನ ವಿರಾಟ್‌ ಕೊಹ್ಲಿ ಕುರಿತು ಹರಿದಾಡಿದ್ದ ವದಂತಿಗೆ ಈಗ ತೆರೆ ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ “ಚಾರ್ಟರ್ಡ್ ಫ್ಲೈಟ್” ವಿವಾದಕ್ಕೆ ಕೊನೆಗೂ ಕೊಹ್ಲಿ ಸ್ವತಃ ಸ್ಪಷ್ಟನೆ ನೀಡಿದ್ದು, ಈ ಸುದ್ದಿ ಸಂಪೂರ್ಣ ಸುಳ್ಳು ಎಂಬುದನ್ನು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ, ಐಪಿಎಲ್ ಪಂದ್ಯಗಳ ನಡುವೆ ಲಂಡನ್‌ಗೆ ತೆರಳಲು ಕೊಹ್ಲಿ ಆರ್‌‌ಸಿಬಿ ಆಡಳಿತ ಮಂಡಳಿಗೆ ಚಾರ್ಟರ್ಡ್ ವಿಮಾನ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು. ವಿಶೇಷವಾಗಿ ಪಂದ್ಯಗಳ ನಡುವೆ ಮೂರು ದಿನಗಳಿಗಿಂತ ಹೆಚ್ಚು ಗ್ಯಾಪ್ ಇದ್ದರೆ, ಲಂಡನ್‌ಗೆ ತೆರಳಿ ಕುಟುಂಬದವರೊಂದಿಗೆ ಕಾಲ ಕಳೆಯುವ ಯೋಜನೆ ಹೊಂದಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಈ ಸುದ್ದಿ ಚರ್ಚೆಗೆ ಕಾರಣವಾಗಿತ್ತು.

ಆದರೆ, ಈ ಎಲ್ಲ ವದಂತಿಗಳಿಗೆ ಕೊಹ್ಲಿ ನೇರವಾಗಿ ತೆರೆ ಎಳೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೈರಲ್ ಆಗಿದ್ದ ಪೋಸ್ಟ್ ಅನ್ನು ಹಂಚಿಕೊಂಡು, ಅದಕ್ಕೆ ನಗುವ ಎಮೋಜಿಗಳನ್ನು ಸೇರಿಸಿದ್ದಾರೆ. ಯಾವುದೇ ಪದಗಳನ್ನು ಬಳಸದೆ, ನಗುವಿನ ಮೂಲಕವೇ ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಅಭಿಮಾನಿಗಳು ಇದನ್ನು ‘ಕ್ಲಾಸಿಕ್ ಕೊಹ್ಲಿ ಸ್ಟೈಲ್’ ಎಂದು ಬಣ್ಣಿಸಿದ್ದಾರೆ.

ವಿರಾಟ್‌ ಕೊಹ್ಲಿ ಐಪಿಎಲ್ 2026 ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು ಭಾರತಕ್ಕೆ ಆಗಮಿಸಿ ಆರ್‌ಸಿಬಿ ತಂಡದೊಂದಿಗೆ ಸೇರಿಕೊಂಡಿದ್ದಾರೆ. ಈಗಾಗಲೇ ತಂಡದ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಅವರು, ಅಭ್ಯಾಸದಲ್ಲಿ ತೊಡಗಿದ್ದಾರೆ. ಅವರ ಬ್ಯಾಟಿಂಗ್ ಅಭ್ಯಾಸದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಐಪಿಎಲ್ ಸಮಯದಲ್ಲಿ ಆಟಗಾರರು ತಂಡದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಚಾರ್ಟರ್ಡ್ ವಿಮಾನ ಬೇಡಿಕೆ ಇಟ್ಟಿದ್ದಾರೆ ಎಂಬುದು ಅಸಾಧ್ಯವೆಂದು ಕ್ರಿಕೆಟ್ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಕೂಡ ಇದನ್ನು ತಳ್ಳಿ ಹಾಕಿರುವುದರಿಂದ, ವದಂತಿಗೆ ಇದೀಗ ಸಂಪೂರ್ಣ ತೆರೆ ಬಿದ್ದಿದೆ.

ಐಪಿಎಲ್ 2026 ಕ್ಕೆ ಮುನ್ನ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ಮಹತ್ವದ ಕೊಡುಗೆ ನೀಡಲು ಸಜ್ಜಾಗಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಈ ಸೀಸನ್‌ನಲ್ಲಿ ತಂಡದ ಪ್ರದರ್ಶನದ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

Exit mobile version