ಏಷ್ಯನ್ ಗೇಮ್ಸ್ ಕ್ರಿಕೆಟ್: ಭಾರತ-ಪಾಕ್‌ಗೆ ನೇರ ಕ್ವಾರ್ಟರ್ ಫೈನಲ್ ಪ್ರವೇಶ

ಶಿ (10)

ಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಡ್ರಾ ಪ್ರಕಟವಾಗಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಶುಭ ಸುದ್ದಿ ಸಿಕ್ಕಿದೆ. ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿವೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಗಳು ಟಿ20 ಮಾದರಿಯಲ್ಲಿ ನಡೆಯಲಿದ್ದು, ಐಚಿ ಪ್ರಿಫೆಕ್ಚರ್‌ನ ಕೊರೋಗಿ ಅಥ್ಲೆಟಿಕ್ ಪಾರ್ಕ್‌ನಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದ ಪಂದ್ಯಾವಳಿಯು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದ್ದು, ಒಟ್ಟು 10 ತಂಡಗಳು ಭಾಗವಹಿಸಲಿವೆ.

ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ. ಉಳಿದ ನಾಲ್ಕು ಸ್ಥಾನಗಳಿಗಾಗಿ ಆರು ತಂಡಗಳು ಆರಂಭಿಕ ಸುತ್ತಿನಲ್ಲಿ ಸೆಣಸಾಡಲಿವೆ. ಗ್ರೂಪ್ ‘ಎ’ಯಲ್ಲಿ ಅಫ್ಘಾನಿಸ್ತಾನ, ಜಪಾನ್ ಮತ್ತು ನೇಪಾಳ ಸ್ಥಾನ ಪಡೆದಿದ್ದರೆ, ಗ್ರೂಪ್ ‘ಬಿ’ಯಲ್ಲಿ ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಒಮಾನ್ ತಂಡಗಳಿವೆ. ಪ್ರತಿಯೊಂದು ಗುಂಪಿನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.

ಡ್ರಾ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಅಥವಾ ಕ್ವಾರ್ಟರ್ ಫೈನಲ್ ಹಂತದಲ್ಲಿ ಮುಖಾಮುಖಿಯಾಗುವುದಿಲ್ಲ. ಹೀಗಾಗಿ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಲು ಫೈನಲ್‌ವರೆಗೂ ಕಾಯಬೇಕಾಗಬಹುದು.

ಮಹಿಳೆಯರ ವಿಭಾಗದ ಪಂದ್ಯಗಳು ಸೆಪ್ಟೆಂಬರ್ 17ರಿಂದ 22ರವರೆಗೆ ನಡೆಯಲಿವೆ. ಭಾರತ ಜಪಾನ್ ವಿರುದ್ಧ, ಪಾಕಿಸ್ತಾನ ಥೈಲ್ಯಾಂಡ್ ವಿರುದ್ಧ, ಶ್ರೀಲಂಕಾ ಮಲೇಷ್ಯಾ ವಿರುದ್ಧ ಹಾಗೂ ಬಾಂಗ್ಲಾದೇಶ ಚೀನಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಆಡಲಿವೆ.

ಭಾರತ ಮಹಿಳಾ ತಂಡ ಜಪಾನ್ ವಿರುದ್ಧ ಗೆಲುವು ಸಾಧಿಸಿದರೆ, ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಅಥವಾ ಚೀನಾ ವಿರುದ್ಧ ಸೆಣಸುವ ಸಾಧ್ಯತೆ ಇದೆ. ಮಹಿಳಾ ವಿಭಾಗದಲ್ಲಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ತಲುಪಿದರೆ ಮಾತ್ರ ಪರಸ್ಪರ ಎದುರಾಗಲಿವೆ.

2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದವು. ಈ ಬಾರಿಯೂ ಉಭಯ ತಂಡಗಳು ತಮ್ಮ ಚಿನ್ನದ ಸಾಧನೆಯನ್ನು ಪುನರಾವರ್ತಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ.

Exit mobile version