ಮುಂಬೈ ವಿರುದ್ಧ ಗೆಲುವಿನ ಬಳಿಕ ಅಸಭ್ಯವಾಗಿ ಸನ್ನೆ ಮಾಡಿದ ಟಿಮ್ ಡೇವಿಡ್

Untitled design 2026 05 11T092645.235

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ರಾಯ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವು ಕೊನೆಯ ಓವರ್‌ನಲ್ಲಿ ನಾಟಕೀಯ ರೀತಿಯಲ್ಲಿ 168 ರನ್ ಗಳಿಸಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಆದರೆ ಈ ರೋಚಕ ಗೆಲುವಿನ ನಂತರ ನಡೆದ ಒಂದು ಘಟನೆ ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಗೆಲುವಿನ ಸಂಭ್ರಮದ ಸಂದರ್ಭದಲ್ಲಿ ಅಸಭ್ಯ ಸನ್ನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವರದಿಗಳ ಪ್ರಕಾರ, ಡಗೌಟ್‌ನಲ್ಲಿ ಕುಳಿತಿದ್ದ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡದತ್ತ ಮಧ್ಯ ಬೆರಳು ತೋರಿಸಿದಂತೆ ಕಂಡುಬಂದಿದ್ದು, ಇದು ಟೀಕೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳ ಪ್ರಕಾರ, ಮೈದಾನದಲ್ಲಿ ಎದುರಾಳಿ ತಂಡ ಅಥವಾ ಪ್ರೇಕ್ಷಕರತ್ತ ಅವಮಾನಕರ ಅಥವಾ ಅಸಭ್ಯ ಸನ್ನೆ ಮಾಡುವುದು ಗಂಭೀರ ನಿಯಮ ಉಲ್ಲಂಘನೆಯಾಗಿದೆ. ಇಂತಹ ವರ್ತನೆ ಸಾಮಾನ್ಯವಾಗಿ ಲೆವೆಲ್ 1 ಅಥವಾ ಲೆವೆಲ್ 2 ಅಪರಾಧವಾಗಿ ಪರಿಗಣಿಸಲಾಗುತ್ತದೆ. ಇದರ ಪರಿಣಾಮವಾಗಿ ಆಟಗಾರರಿಗೆ ಪಂದ್ಯದ ಶುಲ್ಕದಿಂದ 50% ರಿಂದ 100% ರಷ್ಟು ದಂಡ ವಿಧಿಸಬಹುದು. ಜೊತೆಗೆ ಡೆಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.

ಡೆಮೆರಿಟ್ ಅಂಕಗಳು ಹೆಚ್ಚಾದರೆ ಆಟಗಾರರಿಗೆ ಮುಂದಿನ ಪಂದ್ಯಗಳಲ್ಲಿ ನಿಷೇಧದಂತಹ ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಘಟನೆಯ ಕುರಿತು ಮ್ಯಾಚ್ ರೆಫರಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಕ್ರಿಕೆಟ್ ಇತಿಹಾಸದಲ್ಲಿಯೂ ಇಂತಹ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಕೆಲವು ವರ್ಷಗಳ ಹಿಂದೆ ಕೆಲವು ಅಂತಾರಾಷ್ಟ್ರೀಯ ಆಟಗಾರರು ಭಾವೋದ್ವೇಗದಲ್ಲಿ ಅಸಭ್ಯ ಸನ್ನೆ ಮಾಡಿದ ಕಾರಣ ದಂಡ ಮತ್ತು ನಿಷೇಧಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಟಿಮ್ ಡೇವಿಡ್ ವಿರುದ್ಧವೂ ಕ್ರಮ ಕೈಗೊಳ್ಳಬಹುದೆಂಬ ಚರ್ಚೆ ನಡೆಯುತ್ತಿದೆ.

Exit mobile version