ಮೀರತ್: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್ನ ಸೌರಭ್ ರಜಪೂತ್ ಹತ್ಯೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಪತಿಯನ್ನು ಹತ್ಯೆ ಮಾಡಿ ಮೃತದೇಹದ ತುಂಡುಗಳನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಂನಲ್ಲಿ ಹಾಕಿ ಸಿಮೆಂಟ್ನಿಂದ ಮುಚ್ಚಿಟ್ಟ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇಬ್ಬರಿಗೂ ತಲಾ ₹20,000 ದಂಡವನ್ನೂ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 30, 2026ರಂದು ಇಬ್ಬರನ್ನೂ ದೋಷಿಗಳೆಂದು ಘೋಷಿಸಿದ್ದ ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು, ಅಕ್ಟೋಬರ್ 14ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.
ಲಂಡನ್ನಿಂದ ಮರಳಿದ್ದ ಸೌರಭ್ ಹತ್ಯೆ
ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಲಂಡನ್ನಲ್ಲಿನ ಉದ್ಯೋಗವನ್ನು ತೊರೆದು 2025ರ ಫೆಬ್ರವರಿ 24ರಂದು ಮೀರತ್ಗೆ ಮರಳಿದ್ದರು. ಮಾರ್ಚ್ 3ರಂದು ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಸೇರಿ ಸೌರಭ್ ಅವರನ್ನು ಹತ್ಯೆ ಮಾಡಿದ್ದರು.
ತನಿಖೆಯ ಪ್ರಕಾರ, ಸೌರಭ್ ಅವರಿಗೆ ನೀಡಿದ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಲಾಗಿತ್ತು. ಅವರು ಪ್ರಜ್ಞೆ ತಪ್ಪಿದ ಬಳಿಕ ಸಾಹಿಲ್ನನ್ನು ಮನೆಗೆ ಕರೆಸಿಕೊಂಡ ಮುಸ್ಕಾನ್, ಆತನೊಂದಿಗೆ ಸೇರಿ ಹತ್ಯೆ ಎಸಗಿದ್ದಳು. ಬಳಿಕ ಮೃತದೇಹವನ್ನು ಬಾತ್ರೂಮ್ನಲ್ಲಿ ತುಂಡುಗಳಾಗಿ ಕತ್ತರಿಸಿ, ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಂನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಲಾಗಿತ್ತು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿತ್ತು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಪೊಲೀಸ್ ತನಿಖೆಯಲ್ಲಿ ಬಯಲಾದ ರಹಸ್ಯ
ಸೌರಭ್ ಕಾಣೆಯಾಗಿದ್ದರಿಂದ ಅವರ ಸಹೋದರ ಬಬ್ಲು ಅವರು 2025ರ ಮಾರ್ಚ್ 18ರಂದು ಬ್ರಹ್ಮಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಸ್ಕಾನ್ ಮತ್ತು ಸಾಹಿಲ್ ಮೇಲೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಕೋರಿದ್ದರು.
ತನಿಖೆಯ ವೇಳೆ ಮುಸ್ಕಾನ್ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಪೊಲೀಸರು ಮಾರ್ಚ್ 19ರಂದು ಮನೆ ಪರಿಶೀಲಿಸಿದರು. ಈ ವೇಳೆ ನೀಲಿ ಡ್ರಂನಲ್ಲಿದ್ದ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಬಳಿಕ ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಲಾಯಿತು. ಪೊಲೀಸರು 2025ರ ಮೇ 12ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಸಾಕ್ಷ್ಯಗಳ ಆಧಾರದಲ್ಲಿ ಪ್ರಾಸಿಕ್ಯೂಷನ್ ವಾದ
ಪ್ರತ್ಯಕ್ಷದರ್ಶಿಗಳಿಲ್ಲದ ಈ ಪ್ರಕರಣದಲ್ಲಿ ಪರಿಸ್ಥಿತಿಜನ್ಯ ಸಾಕ್ಷ್ಯಗಳು ಪ್ರಮುಖ ಪಾತ್ರ ವಹಿಸಿದ್ದವು. ಸರ್ಕಾರಿ ವಕೀಲ ಕೃಷ್ಣ ಕುಮಾರ್ ಚೌಬೆ ಅವರು ರಕ್ತದ ಕಲೆಗಳಿದ್ದ ಚಾಕುಗಳು, ಕರೆಗಳ ವಿವರಗಳು (CDR), ಮೊಬೈಲ್ ಟವರ್ ಸ್ಥಳದ ಮಾಹಿತಿ ಹಾಗೂ 22 ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು ಎಂದು ವರದಿಯಾಗಿದೆ.
ಈ ಸಾಕ್ಷ್ಯಗಳು ಮತ್ತು ತನಿಖೆಯ ವಿವರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸೆಪ್ಟೆಂಬರ್ 30ರಂದು ಇಬ್ಬರೂ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಬಳಿಕ ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದೆ.