ಆರ್‌ಸಿಬಿಗೆ ಬಿಗ್ ಶಾಕ್: ಟಿಮ್ ಡೇವಿಡ್‌ಗೆ ನಿಷೇಧದ ಶಿಕ್ಷೆ, ಬಿಸಿಸಿಐ ಕಠಿಣ ಕ್ರಮ

Untitled design 2026 06 01T222426.737

ಐಪಿಎಲ್ 2026ರ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಗೆದ್ದು ಸಂಭ್ರಮದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇದೀಗ ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮ ಕೈಗೊಂಡಿದ್ದು, ಒಂದು ಪಂದ್ಯ ನಿಷೇಧದ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ಹಾಗೂ ಎರಡು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.

ಈ ಶಿಕ್ಷೆಯ ಪರಿಣಾಮವಾಗಿ ಟಿಮ್ ಡೇವಿಡ್ 2027ರ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಐಪಿಎಲ್ ಪ್ರಶಸ್ತಿ ಗೆಲುವಿನ ಸಂತಸದ ನಡುವೆಯೇ ಈ ಬೆಳವಣಿಗೆ ಆರ್‌ಸಿಬಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಗುಜರಾತ್ ತಂಡದ ಇನ್ನಿಂಗ್ಸ್ ವೇಳೆ 10ನೇ ಓವರ್‌ನಲ್ಲಿ ಟಿಮ್ ಡೇವಿಡ್ ಕೋಪದ ಭರದಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರ ಕಡೆಗೆ ಐಸ್ ಪ್ಯಾಕ್ ಎಸೆದಿದ್ದಾರೆ ಎನ್ನಲಾಗಿದೆ. ಪಂದ್ಯದಲ್ಲಿ ನಡೆದ ಒಂದು ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಟಿಮ್ ಡೇವಿಡ್ ಈ ರೀತಿ ವರ್ತಿಸಿದ್ದು, ಇದು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ.

ಬಿಸಿಸಿಐ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಟಿಮ್ ಡೇವಿಡ್ ಅವರ ನಡೆ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9ರ ಅಡಿಯಲ್ಲಿ ಬರುತ್ತದೆ. ಈ ನಿಯಮದ ಪ್ರಕಾರ, ಆಟಗಾರರು ಅಥವಾ ತಂಡದ ಅಧಿಕಾರಿಗಳು ಪಂದ್ಯ ನಡೆಯುವ ವೇಳೆ ಅಂಪೈರ್, ಪಂದ್ಯಾಧಿಕಾರಿ, ಸಹ ಆಟಗಾರ ಅಥವಾ ಯಾವುದೇ ವ್ಯಕ್ತಿಯ ಕಡೆಗೆ ಚೆಂಡು, ನೀರಿನ ಬಾಟಲಿ ಅಥವಾ ಇತರೆ ಕ್ರಿಕೆಟ್ ಉಪಕರಣಗಳನ್ನು ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವಂತಿಲ್ಲ. ಈ ನಿಯಮ ಉಲ್ಲಂಘನೆಯ ಹಿನ್ನೆಲೆ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಲ್ಲ. ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯವೊಂದರಲ್ಲಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಅವರಿಗೆ ಒಂದು ಡಿಮೆರಿಟ್ ಅಂಕ ನೀಡಲಾಗಿತ್ತು. ಬಳಿಕ ಮುಂಬೈ ವಿರುದ್ಧವೇ ನಡೆದ ಮತ್ತೊಂದು ಪಂದ್ಯದಲ್ಲಿ ಇದೇ ರೀತಿಯ ವರ್ತನೆ ತೋರಿದ ಕಾರಣ ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗಿತ್ತು.

ಇದೀಗ ಫೈನಲ್ ಪಂದ್ಯದಲ್ಲಿ ನಡೆದ ಘಟನೆಯಿಂದ ಇನ್ನೆರಡು ಡಿಮೆರಿಟ್ ಅಂಕಗಳು ಸೇರಿ ಟಿಮ್ ಡೇವಿಡ್ ಅವರ ಒಟ್ಟು ಡಿಮೆರಿಟ್ ಅಂಕಗಳ ಸಂಖ್ಯೆ ಐದಕ್ಕೆ ಏರಿದೆ. ಐಪಿಎಲ್ ನಿಯಮಾವಳಿಯ ಪ್ರಕಾರ, ನಿರ್ದಿಷ್ಟ ಅವಧಿಯಲ್ಲಿ ಐದು ಡಿಮೆರಿಟ್ ಅಂಕಗಳನ್ನು ಪಡೆದ ಆಟಗಾರನಿಗೆ ಒಂದು ಪಂದ್ಯದ ನಿಷೇಧ ವಿಧಿಸಲಾಗುತ್ತದೆ. ಇದೇ ಕಾರಣಕ್ಕೆ ಟಿಮ್ ಡೇವಿಡ್ ಮುಂದಿನ ಆವೃತ್ತಿಯ ಮೊದಲ ಪಂದ್ಯದಿಂದ ಅಮಾನತುಗೊಂಡಿದ್ದಾರೆ.

ಇದರ ನಡುವೆಯೂ ಟಿಮ್ ಡೇವಿಡ್ ಈ ಆವೃತ್ತಿಯಲ್ಲಿ ಆರ್‌ಸಿಬಿಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 16 ಪಂದ್ಯಗಳಲ್ಲಿ ಕಣಕ್ಕಿಳಿದ ಅವರು 33.88ರ ಸರಾಸರಿಯಲ್ಲಿ 305 ರನ್ ಗಳಿಸಿ ಗಮನ ಸೆಳೆದಿದ್ದರು. ಅವರ ಬ್ಯಾಟ್‌ನಿಂದ ಒಟ್ಟು 23 ಸಿಕ್ಸರ್‌ಗಳು ಹೊರಬಂದಿದ್ದವು. ಫೈನಲ್ ಪಂದ್ಯದಲ್ಲಿಯೂ ನಿರ್ಣಾಯಕ ಹಂತದಲ್ಲಿ 24 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ್ದ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಮೈದಾನದಲ್ಲಿ ತೋರಿದ ಅಸಮರ್ಪಕ ವರ್ತನೆಯಿಂದ ಇದೀಗ ಅವರು ಬಿಸಿಸಿಐನ ಕಠಿಣ ಕ್ರಮಕ್ಕೆ ಗುರಿಯಾಗಿದ್ದಾರೆ. 

Exit mobile version