T20 World Cup 2026: ತವರಲ್ಲಿಯೇ ಶ್ರೀಲಂಕಾಗೆ ಸೋಲುಣಿಸಿ ಗೆದ್ದುಬೀಗಿದ ಜಿಂಬಾಬ್ವೆ

Untitled design 2026 02 19T202251.905

ಕೊಲಂಬೊ: ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಟೂರ್ನಿಯಲ್ಲಿ ಇದುವರೆಗೆ ಸೋಲಿನ ರುಚಿ ಕಾಣದಿದ್ದ ಶ್ರೀಲಂಕಾ ತಂಡಕ್ಕೆ ಜಿಂಬಾಬ್ವೆ (Zimbabwe) ತಂಡ ಭಾರೀ ಮುಖಭಂಗ ನೀಡಿದೆ.  ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ (R. Premadasa Stadium) ನಡೆದ ಬಿ ಗುಂಪಿನ 38ನೇ ಪಂದ್ಯದಲ್ಲಿ ಜಿಂಬಾಬ್ವೆ 6 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಜಿಂಬಾಬ್ವೆ 7 ಅಂಕಗಳನ್ನು ಗಳಿಸಿ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಶ್ರೀಲಂಕಾ ಇನ್ನಿಂಗ್ಸ್: ನಿಸ್ಸಂಕ ಅರ್ಧಶತಕ

ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ 41 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 62 ರನ್ ಗಳಿಸಿದರು. ಮತ್ತೊಬ್ಬ ಆರಂಭಿಕ ಕುಸಾಲ್ ಪೆರೆರಾ 22 ರನ್ ಸೇರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಪವನ್ ರತ್ನಾಯಕೆ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 44 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ಕುಸಾಲ್ ಮೆಂಡಿಸ್ 14 ರನ್ ಗಳಿಸಿದರೆ, ಕಮಿಂದು ಮೆಂಡಿಸ್ 7 ರನ್ ಮಾಡಿ ಔಟಾದರು. ನಾಯಕ ದಸುನ್ ಶಣಕ ಕೇವಲ 6 ರನ್‌ಗೆ ವಿಕೆಟ್ ಕಳೆದುಕೊಂಡರು. ದುನಿತ್ ವೆಲ್ಲಲಾಗೆ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಜಿಂಬಾಬೈಗೆ 179 ರನ್‌ಗಳ ಸವಾಲಿನ ಗುರಿ ನೀಡಿತು.

ಜಿಂಬಾಬ್ವೆ ಪರ ಬೌಲಿಂಗ್‌ನಲ್ಲಿ ಬ್ಲೆಸಿಂಗ್ ಮುಜರ್‌ಬಾನಿ, ಬ್ರಾಡ್ ಎವಾನ್ಸ್ ಮತ್ತು ಗ್ರೇಮ್ ಕ್ರೆಮರ್ ತಲಾ 2 ವಿಕೆಟ್ ಪಡೆದು ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ರಯಾನ್ ಬರ್ಲ್ ಒಂದು ವಿಕೆಟ್ ಪಡೆದು ಬೆಂಬಲ ನೀಡಿದರು.

179 ರನ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಆರಂಭದಿಂದಲೇ ಧೈರ್ಯಶಾಲಿ ಆಟವಾಡಿತು. ಆರಂಭಿಕ ಬ್ಯಾಟರ್ ಬ್ರಿಯಾನ್ ಬೆನೆಟ್ 48 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ ಅಜೇಯ 63 ರನ್ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ತಡಿವನಾಶ ಮಾರುಮಾನಿ 34 ರನ್‌ಗಳ ಕೊಡುಗೆ ನೀಡಿದರು.

ನಾಯಕ ಸಿಕಂದರ್ ರಾಜಾ ಸಿಡಿಲಾಟದ ಇನ್ನಿಂಗ್ಸ್ ಆಡಿದರು. 26 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 45 ರನ್ ಸಿಡಿಸಿ ಪಂದ್ಯವನ್ನು ಲಂಕಾದ ಕೈಯಿಂದ ಕಸಿದುಕೊಂಡರು. ರಯಾನ್ ಬರ್ಲ್ 23 ರನ್ ಸೇರಿಸಿ ತಂಡಕ್ಕೆ ಬಲ ನೀಡಿದರು. ಅಂತಿಮವಾಗಿ ಜಿಂಬಾಬ್ವೆ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಲಂಕಾ ಬೌಲಿಂಗ್ ವಿಫಲ

ಶ್ರೀಲಂಕಾ ಪರ ದುಶನ್ ಹೇಮಂತ 2 ವಿಕೆಟ್ ಪಡೆದರು. ದಸುನ್ ಶಣಕ ಮತ್ತು ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್ ಪಡೆದರೂ, ಜಿಂಬಾಬ್ವೆ ಬ್ಯಾಟರ್‌ಗಳ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ. ವಿಶೇಷವಾಗಿ ಕೊನೆಯ ಓವರ್‌ಗಳಲ್ಲಿ ರಾಜಾ ಮತ್ತು ಬೆನೆಟ್ ಆಟ ಪಂದ್ಯವನ್ನು ಸಂಪೂರ್ಣವಾಗಿ ಜಿಂಬಾಬ್ವೆ ಕಡೆ ತಳ್ಳಿತು.

 

Exit mobile version