ಬೆಂಗಳೂರು: ಕರ್ನಾಟಕ ಸರ್ಕಾರದ ಜನಪ್ರಿಯ ಉಚಿತ ವಿದ್ಯುತ್ ಯೋಜನೆಯಾದ ‘ಗೃಹಜ್ಯೋತಿ’ ಯೋಜನೆಯಡಿ ಫಲಾನುಭವಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಬಾಡಿಗೆದಾರರಾಗಿರುವ ಗೃಹಜ್ಯೋತಿ ಫಲಾನುಭವಿಗಳಿಗೆ ಅಗ್ರಿಮೆಂಟ್ ಕಾಪಿ ಇಲ್ಲದಿದ್ದರೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಂಧನ ಇಲಾಖೆ ಈ ಸಂಬಂಧ ಹೊಸ ಫಾರಂ ಸಿದ್ಧಪಡಿಸಿದ್ದು, ಬಾಡಿಗೆದಾರರು ಮತ್ತು ಮಾಲೀಕರು ಜಂಟಿಯಾಗಿ ಸಹಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಬಾಡಿಗೆದಾರರಿಗೆ ಅನುಕೂಲ
ಬಾಡಿಗೆ ಅಗ್ರಿಮೆಂಟ್ ಪ್ರತಿ ಇಲ್ಲದಿದ್ದರೆ ಬೆಸ್ಕಾಂ ಅಧಿಕಾರಿಗಳು ಕೊಡುವ ಒಂದು ಫಾರಂಗೆ ಬಾಡಿಗೆದಾರರು ಮತ್ತು ಮಾಲೀಕರು ಸಹಿ ಹಾಕಿ ಕೊಡಬೇಕು. ಇದಕ್ಕಾಗಿ ಇಂಧನ ಇಲಾಖೆ ಹೊಸ ಫಾರಂ ಸಿದ್ಧಪಡಿಸಿದೆ. ಗ್ರಾಮಾಂತರ ಭಾಗಗಳಲ್ಲಿ ಅಗ್ರಿಮೆಂಟ್ ಕಾಪಿ ಇಲ್ಲದೇ ಅರ್ಜಿ ಸಲ್ಲಿಕೆ ಕಷ್ಟಕರವಾಗಿದ್ದು, ಈ ಹೊಸ ಫಾರಂ ಮೂಲಕ ಅರ್ಜಿ ಸಲ್ಲಿಸುವುದು ಸುಲಭವಾಗಲಿದೆ.
ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ
ಗೃಹಜ್ಯೋತಿ ಪರಿಷ್ಕರಣೆಗಾಗಿ ಬಿಲ್ ರೀಡರ್‌ಗಳನ್ನು ಬಳಸಿಕೊಳ್ಳುತ್ತಿರುವ ಕಾರಣ ಜುಲೈ ತಿಂಗಳಿನಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ. ಬದಲಿಗೆ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಜುಲೈ ತಿಂಗಳ ಸರಾಸರಿ ಬಿಲ್ ಬರಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಈ ಬಗ್ಗೆ ಗೊಂದಲ ಪಡಬೇಕಾಗಿಲ್ಲ ಎಂದು ತಿಳಿಸಲಾಗಿದೆ.
ಗೃಹಜ್ಯೋತಿ ಆ್ಯಪ್ ಮೂಲಕ ಪರಿಶೀಲನೆ
ಸಾರ್ವಜನಿಕರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕವೇ ಗೃಹಜ್ಯೋತಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬಹುದು. ಈ ಕುರಿತು ಸುಲಭವಾಗಿ ಮಾಹಿತಿ ನೀಡಲು ಲೈನ್‌ಮ್ಯಾನ್ ಒಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (@powerman_yogesh) ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಆ್ಯಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
-
ಗೃಹಜ್ಯೋತಿ ಆ್ಯಪ್ ಓಪನ್ ಮಾಡಿ.
-
ನಿಮ್ಮ ಭಾಗದ ವಿದ್ಯುತ್ ಸರಬರಾಜು ಸಂಸ್ಥೆಯನ್ನು (BESCOM, HESCOM, MESCOM ಇತ್ಯಾದಿ) ಆಯ್ಕೆ ಮಾಡಿ.
-
ನಿಮ್ಮ ವಿದ್ಯುತ್ ಬಿಲ್ನಲ್ಲಿರುವ ಗ್ರಾಹಕರ ಖಾತೆ ಸಂಖ್ಯೆಯನ್ನು (Account ID) ಟೈಪ್ ಮಾಡಿ, “ವಿವರಗಳನ್ನು ಪಡೆಯಿರಿ” ಕ್ಲಿಕ್ ಮಾಡಿ. ನಿಮ್ಮ ಹೆಸರು, ವಿಳಾಸ ಕಾಣಿಸುತ್ತದೆ. ಅದು ಸರಿಯಾಗಿದ್ದರೆ “ಹೌದು” ಎಂದು ಮುಂದುವರಿಯಿರಿ.
-
ಚಾಲ್ತಿಯಲ್ಲಿರುವ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಬರುವ OTP ಮೂಲಕ ಮೊಬೈಲ್ ವೆರಿಫಿಕೇಶನ್ ಮಾಡಿ.
-
ನೀವು ಆ ಮನೆಯ ಮಾಲೀಕರೇ ಅಥವಾ ಬಾಡಿಗೆದಾರರೇ ಎಂಬುದನ್ನು ಆಯ್ಕೆ ಮಾಡಿ.
-
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, OTP ಜನರೇಟ್ ಮಾಡಿ. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ OTP ಹಾಕಿ ಆಧಾರ್ ಇ-ಕೆವೈಸಿ ಪೂರ್ಣಗೊಳಿಸಿ.
-
ನಿಮ್ಮ ಜಿಲ್ಲೆ, ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವನ್ನು ಸರಿಯಾಗಿ ಆಯ್ಕೆ ಮಾಡಿ.
-
ಪಡಿತರ ಚೀಟಿಯ ಪ್ರಕಾರ (APL ಅಥವಾ BPL) ಸೂಕ್ತ ಆಯ್ಕೆ ಮಾಡಿ.
-
ನೀವು ಕರ್ನಾಟಕದ ನೋಂದಾಯಿತ ಮತದಾರರೇ ಎಂಬುದಕ್ಕೆ ‘ಹೌದು’ ಎಂದು ಗುರುತಿಸಿ, ವೋಟರ್ ಐಡಿಯಲ್ಲಿರುವಂತೆ ಪೂರ್ಣ ಹೆಸರು ಮತ್ತು EPIC ಸಂಖ್ಯೆಯನ್ನು ನಮೂದಿಸಿ.
-
ಮತದಾರರ ಚೀಟಿಯ ಮುಂಭಾಗ ಮತ್ತು ಹಿಂಭಾಗದ ಸ್ಪಷ್ಟ ಫೋಟೋ ಅಪ್ಲೋಡ್ ಮಾಡಿ.
-
ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ‘ಹೌದು’ ಎಂದು, ಇಲ್ಲದಿದ್ದರೆ ‘ಇಲ್ಲ’ ಎಂದು ಆಯ್ಕೆ ಮಾಡಿ. (ತೆರಿಗೆದಾರರಾಗಿದ್ದರೆ ಪ್ಯಾನ್ ಕಾರ್ಡ್ ವಿವರ ಹಾಗೂ ಫೋಟೋ ಅಪ್ಲೋಡ್ ಮಾಡಬೇಕು).
-
ನಿಮ್ಮ ವೃತ್ತಿ (ರೈತ, ಕೂಲಿ ಕಾರ್ಮಿಕ, ಖಾಸಗಿ ಉದ್ಯೋಗ ಇತ್ಯಾದಿ) ಮತ್ತು ಸಾಮಾಜಿಕ ವರ್ಗವನ್ನು (SC, ST, OBC, Minority) ಆಯ್ಕೆ ಮಾಡಿ.
-
ಕೊನೆಯದಾಗಿ ನಿಮ್ಮ ‘ಲೈವ್ ಫೋಟೋ’ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿ.
-
ಸ್ವಯಂ ಘೋಷಣೆಯ ನಿಯಮಗಳನ್ನು ಓದಿ, ಚೆಕ್ ಬಾಕ್ಸ್ ಟಿಕ್ ಮಾಡಿ.
-
ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡು “ಅರ್ಜಿ ಸಲ್ಲಿಸಿ” ಬಟನ್ ಒತ್ತಿ.
-
ನೋಂದಣಿ ಯಶಸ್ವಿಯಾಗಿದೆ ಎಂಬ ಸಂದೇಶ ಮೂಡುತ್ತದೆ. ಅಧಿಕಾರಿಗಳು ವಿವರಗಳನ್ನು ಪರಿಶೀಲಿಸಿದ ನಂತರ ಮುಂದಿನ ಮಾಹಿತಿ ಲಭ್ಯವಾಗಲಿದೆ.
ವಿಶೇಷ ಗಮನಿಸಿ: ‘ST’ ಅಥವಾ ಇತರೆ ನಿರ್ದಿಷ್ಟ ವರ್ಗವನ್ನು ಆಯ್ಕೆ ಮಾಡಿದರೆ, ಕಡ್ಡಾಯವಾಗಿ ನಿಮ್ಮ RD ಪ್ರಮಾಣಪತ್ರ ಸಂಖ್ಯೆಯನ್ನು ನಮೂದಿಸಬೇಕು. OBC ಅಥವಾ ಸಾಮಾನ್ಯ ವರ್ಗಗಳಿಗೆ ಇದರ ಅಗತ್ಯವಿಲ್ಲ.
