ಬೆಂಗಳೂರು ಆ.30: ರಾಜ್ಯ ಸರ್ಕಾರದ ಪ್ರಮುಖ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಐತಿಹಾಸಿಕ ಹಾಗೂ ಸರ್ಕಾರಿ ಕಟ್ಟಡಗಳು ಗುಲಾಬಿ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.
ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೊಂಡಿರುವ ಗೃಹಲಕ್ಷ್ಮೀ ಯೋಜನೆಯ ಮೂರು ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಹಲವು ಪ್ರಮುಖ ಸ್ಥಳಗಳಿಗೆ ಪಿಂಕ್ ಲೈಟಿಂಗ್ ಅಳವಡಿಸಲಾಗಿದೆ.
ಪಿಂಕ್ ಲೈಟ್‌ನಲ್ಲಿ ಹಂಪಿಯ ಕಲ್ಲಿನ ತೇರು
ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಕಲ್ಲಿನ ತೇರು ಗುಲಾಬಿ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ರಾತ್ರಿ ವೇಳೆ ವಿಶೇಷವಾಗಿ ಕಂಗೊಳಿಸಿತು. ಹಂಪಿಯ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿರುವ ಕಲ್ಲಿನ ತೇರಿಗೆ ಪಿಂಕ್ ಲೈಟಿಂಗ್ ಅಳವಡಿಸಲಾಗಿದ್ದು, ರಾತ್ರಿ ವೇಳೆ ಸ್ಮಾರಕದ ಸೌಂದರ್ಯ ಮತ್ತಷ್ಟು ಹೆಚ್ಚಾಯಿತು.
ಗುಲಾಬಿ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಕಲ್ಲಿನ ತೇರನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಸಾಮಾನ್ಯವಾಗಿ ತನ್ನ ಐತಿಹಾಸಿಕ ವಾಸ್ತುಶಿಲ್ಪದಿಂದ ಗಮನ ಸೆಳೆಯುವ ಕಲ್ಲಿನ ತೇರು, ವಿಶೇಷ ದೀಪಾಲಂಕಾರದಿಂದ ಪ್ರವಾಸಿಗರ ಗಮನ ಸೆಳೆಯಿತು.
ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಮೂರು ವರ್ಷಗಳ ಸಂಭ್ರಮಕ್ಕೆ ಕಲ್ಲಿನ ತೇರು ಸಾಕ್ಷಿಯಾಯಿತು.
ಪಿಂಕ್ ಲೈಟ್‌ನಲ್ಲಿ ಸುವರ್ಣಸೌಧ
ಇದೇ ವೇಳೆ ಬೆಳಗಾವಿಯ ಹಲಗಾ ಬಳಿ ಇರುವ ಸುವರ್ಣಸೌಧಕ್ಕೂ ಗುಲಾಬಿ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪಿಂಕ್ ಲೈಟಿಂಗ್‌ನಿಂದ ಸುವರ್ಣಸೌಧ ರಾತ್ರಿ ವೇಳೆ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿತು.
ಬೆಳಗಾವಿ ನಗರದ ವಿವಿಧ ಸರ್ಕಾರಿ ಕಚೇರಿಗಳಿಗೂ ಪಿಂಕ್ ಲೈಟಿಂಗ್ ಅಳವಡಿಸಲಾಗಿದ್ದು, ನಗರದ ಪ್ರಮುಖ ಸ್ಥಳಗಳು ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದವು. ನಗರದ ಮಧ್ಯಭಾಗದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುತ್ಥಳಿಗೂ ಪಿಂಕ್ ಲೈಟಿಂಗ್ ಮಾಡಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಜಾರಿಗೊಳಿಸಲಾದ ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವಿಶೇಷ ದೀಪಾಲಂಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಯೋಜನೆಯ ಮೂರು ವರ್ಷಗಳ ಸಂಭ್ರಮವನ್ನು ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳ ಮೂಲಕವೂ ಆಚರಿಸಲಾಗುತ್ತಿದೆ.
