ಕೊಲಂಬೊ: ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಆರಂಭಿಕ ಪಂದ್ಯವು ಮಳೆಯಿಂದಾಗಿ ರದ್ದಾಗಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಶನಿವಾರ (ಫೆಬ್ರವರಿ 21) ನಡೆಯಬೇಕಿದ್ದ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಗಿದೆ.
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಟಾಸ್ ನಡೆದಿತ್ತು. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಟಾಸ್ ಮುಗಿಯುತ್ತಿದ್ದಂತೆಯೇ ತುಂತುರು ಮಳೆ ಆರಂಭವಾಗಿ ಕ್ರಮೇಣ ಜೋರಾಯಿತು. ಸುಮಾರು ಎರಡು ಗಂಟೆಗಳ ಕಾಲ ಮಳೆ ನಿಲ್ಲುವವರೆಗೆ ಕಾಯಲಾಯಿತು. ಆದರೆ ಮಳೆ ಕಡಿಮೆ ಆಗಲಿಲ್ಲ. ರಾತ್ರಿ 9 ಗಂಟೆಯ ನಂತರ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.
ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ
ಪಂದ್ಯ ರದ್ದಾದ ಪರಿಣಾಮ ಎರಡೂ ತಂಡಗಳು ತಲಾ 1 ಅಂಕವನ್ನು ಹಂಚಿಕೊಂಡಿವೆ. ಪೂರ್ಣ ಪಂದ್ಯ ನಡೆದಿದ್ದರೆ ಒಂದು ತಂಡಕ್ಕೆ 2 ಅಂಕ ಲಭಿಸುತ್ತಿತ್ತು. ಈಗ ಎರಡೂ ತಂಡಗಳು ತಮ್ಮ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಗ್ರೂಪ್ 2ರಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ ಜೊತೆಗೆ ಇಂಗ್ಲೆಂಡ್ ಮತ್ತು ಆತಿಥೇಯ ಶ್ರೀಲಂಕಾ ತಂಡಗಳೂ ಇವೆ.
ಮುಂದಿನ ಪಂದ್ಯಗಳ ವೇಳಾಪಟ್ಟಿ
ಪಾಕಿಸ್ತಾನದ ಮುಂದಿನ ಪಂದ್ಯ ಫೆಬ್ರವರಿ 24 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ನ್ಯೂಜಿಲೆಂಡ್‌ನ ಮುಂದಿನ ಪಂದ್ಯ ಫೆಬ್ರವರಿ 25 ರಂದು ಶ್ರೀಲಂಕಾ ವಿರುದ್ಧ ನಡೆಯಲಿದೆ. ನಂತರ ನ್ಯೂಜಿಲೆಂಡ್ ಫೆಬ್ರವರಿ 27 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಶ್ರೀಲಂಕಾ ಫೆಬ್ರವರಿ 28 ರಂದು ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ..
ಸೂಪರ್ 8 ಸುತ್ತಿನಲ್ಲಿ ಎರಡು ಗುಂಪುಗಳಿಂದ ಅಗ್ರ ಎರಡು ಸ್ಥಾನ ಪಡೆಯುವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಈಗಾಗಲೇ ಒಂದು ಪಂದ್ಯ ರದ್ದಾಗಿರುವುದರಿಂದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮೇಲೆ ಒತ್ತಡ ಹೆಚ್ಚಿದೆ. ಈ ಎರಡೂ ತಂಡಗಳು ಸೆಮಿಫೈನಲ್ ತಲುಪಬೇಕೆಂದರೆ, ಉಳಿದ 2 ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ವೇಳೆ ಉಭಯ ತಂಡಗಳು ಇನ್ನೊಂದು ಪಂದ್ಯವನ್ನು ಸೋತರೂ ಪಂದ್ಯಾವಳಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ಈ ಮೈದಾನದಲ್ಲಿ ಈ ಹಿಂದೆಯೂ ಮಳೆ ಅಡ್ಡಿಯಾಗಿತ್ತು. ಗುಂಪು ಹಂತದಲ್ಲಿ ನಡೆದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲೂ ಕೂಡ ಮಳೆಯಾಗಿತ್ತು. ಆದರೆ ಆ ಪಂದ್ಯದಲ್ಲಿ ಮಳೆ ನಿಂತ ಬಳಿಕ ಪಂದ್ಯ ನಡೆದು ಭಾರತ ಜಯ ಸಾಧಿಸಿತ್ತು. ಇದೀಗ ಸೂಪರ್ 8ರ ಮೊದಲ ಪಂದ್ಯವೇ ರದ್ದಾಗಿರುವುದು ಪಾಕಿಸ್ತಾನ ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಕೆಲವು ದಿನಗಳಲ್ಲಿ ಕೊಲಂಬೊದಲ್ಲಿ ಮಳೆಯ ಸಾಧ್ಯತೆ ಇದ್ದು, ಇದು ಇತರ ಪಂದ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
