ಬೆಂಗಳೂರು, ಫೆಬ್ರವರಿ 21: ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲಂಚ ಸ್ವೀಕರಿಸುತ್ತಿದ್ದಾಗ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, “ಇತರರ ಮೇಲೆ ಆರೋಪ ಮಾಡುವುದು ಸುಲಭ. ಆದರೆ ಈಗ ಲಂಚದ ಆರೋಪ ಎದುರಿಸುತ್ತಿರುವವರು ತಮ್ಮದೇ ಪಕ್ಷದ ಶಾಸಕರಾಗಿದ್ದಾರೆ ಎಂಬುದನ್ನು ಗಮನಿಸಬೇಕು” ಎಂದು ಬಿಜೆಪಿಗೆ ತಿರುಗೇಟು ನೀಡಿದರು.
“ಈ ಪ್ರಕರಣದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಸಂಪೂರ್ಣ ಸ್ವತಂತ್ರವಾಗಿ ತನಿಖೆ ನಡೆಸಲಿ. ಸತ್ಯ ಹೊರಬರಬೇಕು,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಲಂಚ ಸ್ವೀಕಾರದ ವೇಳೆ ಸಿಕ್ಕಿಬಿದ್ದಿರುವ ವಿಚಾರದಲ್ಲಿ ಬಿಜೆಪಿಯ ಹಿರಿಯ ನಾಯಕರು ಸ್ಪಷ್ಟನೆ ನೀಡಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ರಾಜಕೀಯವಾಗಿ ಇತರರನ್ನು ಟೀಕಿಸುವ ಮೊದಲು ತಮ್ಮ ಪಕ್ಷದೊಳಗಿನ ಬೆಳವಣಿಗೆಗಳನ್ನೂ ಪರಿಶೀಲಿಸಬೇಕು ಎಂದು ಸಿಎಂ ಪರೋಕ್ಷವಾಗಿ ಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳು ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದೂ ಹೇಳಿದರು.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ
ಗದಗ: ಲಂಚದ ಬಲೆಯಲ್ಲಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಸಿಲುಕಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕರೂ, ವೈದ್ಯರೂ ಆಗಿರುವ ಡಾ. ಚಂದ್ರು ಲಮಾಣಿ ಅವರು ತಮ್ಮ ಸ್ವಂತ ಆಸ್ಪತ್ರೆಯಲ್ಲೇ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಗುತ್ತಿಗೆದಾರನೊಬ್ಬರಿಂದ 5 ಲಕ್ಷ ರೂಪಾಯಿ ಕಮಿಷನ್ ಹಣ ಪಡೆಯುತ್ತಿರುವ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಗೆ ದೊರಕಿತ್ತು. ಈ ಹಿನ್ನೆಲೆ ಪೂರ್ವಯೋಜಿತ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಹಣ ಹಸ್ತಾಂತರವಾಗುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿ ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.
ಡಾ. ಚಂದ್ರು ಲಮಾಣಿ ವೈದ್ಯ ವೃತ್ತಿಯಿಂದ ರಾಜಕೀಯಕ್ಕೆ ಬಂದವರು. ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಅವರ ಒಡೆತನದಲ್ಲಿದ್ದು, ಸ್ಥಳೀಯವಾಗಿ ಪ್ರಸಿದ್ಧ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಲಂಚ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ..
ಲೋಕಾಯುಕ್ತ ದಾಳಿಯ ವೇಳೆ ಶಾಸಕರ ಇಬ್ಬರು ಪಿಎಗಳು ಮಂಜುನಾಥ್ ಹಾಗೂ ಗುರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಆಸ್ಪತ್ರೆ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಸಂಬಂಧಿತ ದಾಖಲೆಗಳು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ದಾಳಿ ಹಲವು ಗಂಟೆಗಳ ಕಾಲ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.