ಕೊಲಂಬೊ: ಐಸಿಸಿ ಟಿ20 ವಿಶ್ವಕಪ್ 2026ರ ಅತ್ಯಂತ ನಿರೀಕ್ಷಿತ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಸಾರಥ್ಯದ ಟೀಂ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿದೆ.
ಇಶಾನ್ ಕಿಶನ್ ಪವರ್‌ಫುಲ್ ಇನ್ನಿಂಗ್ಸ್
ಪಂದ್ಯದ ಮೊದಲ ಓವರ್‌ನಲ್ಲೇ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಜೋಡಿ ಪಾಕ್ ಬೌಲರ್‌ಗಳನ್ನು ಧೂಳೀಪಟ ಮಾಡಿತು. ಈ ಜೋಡಿ ಕೇವಲ 46 ಎಸೆತಗಳಲ್ಲಿ 87 ರನ್‌ಗಳ ಅಮೂಲ್ಯ ಜೊತೆಯಾಟವಾಡಿತು.
ವಿಶೇಷವೆಂದರೆ, ಈ ಜೊತೆಯಾಟದಲ್ಲಿ ಸಿಂಹಪಾಲು ಇಶಾನ್ ಕಿಶನ್ ಅವರದ್ದಾಗಿತ್ತು. ಕೇವಲ 40 ಎಸೆತಗಳನ್ನು ಎದುರಿಸಿದ ಕಿಶನ್, 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳೊಂದಿಗೆ 77 ರನ್ ಚಚ್ಚಿದರು. ಇನ್ನೊಂದೆಡೆ ಇವರಿಗೆ ಸಾಥ್ ನೀಡಿದ ತಿಲಕ್ ವರ್ಮಾ 24 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು.
ಮಧ್ಯಮ ಕ್ರಮಾಂಕದ ಹೋರಾಟ
ಇಶಾನ್ ಕಿಶನ್ ಔಟಾದ ಬಳಿಕ ಭಾರತದ ರನ್ ವೇಗಕ್ಕೆ ಸ್ವಲ್ಪ ಮಟ್ಟಿಗೆ ಬ್ರೇಕ್ ಬಿತ್ತು. ನಾಯಕ ಸೂರ್ಯಕುಮಾರ್ ಯಾದವ್ (32 ರನ್, 29 ಎಸೆತ) ಹಾಗೂ ಶಿವಂ ದುಬೆ (27 ರನ್, 17 ಎಸೆತ) ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರೆ, ಕೊನೆಯಲ್ಲಿ ರಿಂಕು ಸಿಂಗ್ ಕೇವಲ 4 ಎಸೆತಗಳಲ್ಲಿ ಅಜೇಯ 11 ರನ್ ಸಿಡಿಸಿ ತಂಡದ ಮೊತ್ತವನ್ನು 175ಕ್ಕೆ ತಲುಪಿಸಿದರು.
ಭಾರತದ ಈ 175 ರನ್ ಮೊತ್ತವು ಈ ಮೈದಾನದಲ್ಲಿ ಟಿ20 ವಿಶ್ವಕಪ್ ಇತಿಹಾಸದ 2ನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಐರ್ಲೆಂಡ್ ವಿರುದ್ಧ 182 ರನ್ ಗಳಿಸಿದ್ದು ಅಗ್ರಸ್ಥಾನದಲ್ಲಿದೆ.
ಕೊಲಂಬೊದಲ್ಲಿ ಚೇಸಿಂಗ್ ಇತಿಹಾಸ: ಈ ಮೈದಾನದಲ್ಲಿ ಗರಿಷ್ಠ ರನ್ ಬೆನ್ನಟ್ಟಿದ ದಾಖಲೆ ಬಾಂಗ್ಲಾದೇಶದ ಹೆಸರಲ್ಲಿದೆ (215 ರನ್). ಪಾಕಿಸ್ತಾನ ತಂಡ ಇಂದು 176 ರನ್ ಗಳಿಸಿದರೆ, ಅದು ಈ ಮೈದಾನದ 3ನೇ ಗರಿಷ್ಠ ಚೇಸಿಂಗ್ ದಾಖಲೆಯಾಗಲಿದೆ. ಈ ಹಿಂದೆ ಜಿಂಬಾಬ್ವೆ 178 ರನ್ ಹಾಗೂ ಶ್ರೀಲಂಕಾ 175 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿವೆ. ಭಾರತದ ಸ್ಪಿನ್ ತ್ರಿವಳಿಗಳಾದ ಕುಲ್‌ದೀಪ್, ಅಕ್ಷರ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಎದುರಿಸಿ ಪಾಕ್ ಈ ಮೊತ್ತ ತಲುಪುತ್ತದೆಯೇ ಎಂಬುದು ಈಗಿನ ಕುತೂಹಲ.





