ದುಬೈ, ಸೆಪ್ಟೆಂಬರ್ 22: 2025ರ ಏಷ್ಯಾ ಕಪ್ ಟಿ-20 ಟೂರ್ನಮೆಂಟ್‌ನ ಸೂಪರ್-4 ಹಂತದಲ್ಲಿ ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದೆ. ಗ್ರೂಪ್ ಹಂತದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಸೂಪರ್-4ನಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ತನ್ನ ಮೇಲುಗೈ ಸಾಧಿಸಿದೆ. ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸುರಿಯುವಂತೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ತಂಡವನ್ನು ತಮಾಷೆಯಾಗಿ ಕಾಲೆಳೆಯುವಲ್ಲಿ ಯಶಸ್ವಿಯಾದರು. ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳನ್ನು “ಪ್ರತಿಸ್ಪರ್ಧೆ” ಎಂದು ಕರೆಯುವುದೇ ಸರಿಯೇ ಎಂದು ಪ್ರಶ್ನಿಸಿದ ಸೂರ್ಯ, “ಪ್ರತಿಸ್ಪರ್ಧೆ ಎಂದರೆ ಎರಡೂ ತಂಡಗಳಿಗೆ ಸಮಾನ ಸಾಧ್ಯತೆ ಇರಬೇಕು. ಆದರೆ 3-0, 10-1 ರೀತಿಯ ಫಲಿತಾಂಶಗಳು ಪದೇ ಪದೇ ಬಂದರೆ, ಅದನ್ನು ಪ್ರತಿಸ್ಪರ್ಧೆ ಎನ್ನಲಾಗದು. ಒಳ್ಳೆಯ ಕ್ರಿಕೆಟ್ ಆಡಲು ಒಂದು ಸ್ಟ್ಯಾಂಡರ್ಡ್ ಇರಬೇಕು,” ಎಂದು ನಗುನಗುತ್ತಾ ಹೇಳಿದರು. ಈ ಮಾತು ಕೇಳಿದವರಿಗೆ ಒಂದೇ ಸಮನೆ ಅಚ್ಚರಿಯೂ ಆಯಿತು, ಹಾಸ್ಯವೂ ಎನಿಸಿತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದು, ಇದುವರೆಗೆ ಈ ಎರಡು ತಂಡಗಳು 15 ಬಾರಿ ಟಿ20ಯಲ್ಲಿ ಮುಖಾಮುಖಿಯಾಗಿದ್ದು, ಭಾರತ 12 ಬಾರಿ ಗೆಲುವಿನ ನಗೆ ಬೀರಿದರೆ, ಪಾಕಿಸ್ತಾನ ಕೇವಲ 3 ಬಾರಿ ಮಾತ್ರ ಜಯ ಗಳಿಸಿದೆ. 2022ರ ಟಿ20 ವಿಶ್ವಕಪ್‌ನ ಬಳಿಕ ಭಾರತ ಆಡಿದ ಎಲ್ಲಾ ಟಿ20 ಪಂದ್ಯಗಳಲ್ಲೂ ಪಾಕಿಸ್ತಾನವನ್ನು ಮಣಿಸಿದೆ.
ಗ್ರೂಪ್ ಹಂತದ ಸೋಲಿನಿಂದ ಕೆಲವು ಕ್ರಿಕೆಟ್ ತಜ್ಞರು ಪಾಕಿಸ್ತಾನ ಸೂಪರ್-4ರಲ್ಲಿ ಸೇಡು ತೀರಿಸಿಕೊಳ್ಳಬಹುದೆಂದು ಭವಿಷ್ಯ ನುಡಿದಿದ್ದರು. ಆದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಪಾಕ್ ತಂಡ, ಜೀವದಾನಗಳ ಸಹಾಯದಿಂದ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ, ಕೇವಲ 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, 39 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಸ್ಫೋಟಕ 74 ರನ್ ಗಳಿಸಿ ಗೆಲುವಿಗೆ ಪಾತ್ರವಹಿಸಿದರು.