ಸ್ಮೃತಿ ಮಂದಾನ ಅಪ್ಪನಿಗೆ ಹೃದಯಾಘಾತ: ಸ್ಮೃತಿ ಮಂದಾನ-ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆ

Untitled design (63)

ಮುಂಬೈ/ಸಾಂಗ್ಲಿ, ನವೆಂಬರ್ 23: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ, ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (29) ಮತ್ತು ಪ್ರಖ್ಯಾತ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ (32) ಅವರ ವಿವಾಹ ಕಾರ್ಯಕ್ರಮ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇಂದು (ನವೆಂಬರ್ 23, 2025) ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮದೋಲ್ ಬಳಿಯ ಮಂಧಾನ ಕುಟುಂಬದ ಫಾರ್ಮ್‌ಹೌಸ್‌ನಲ್ಲಿ ಭರ್ಜರಿ ತಯಾರಿ ನಡೆದಿತ್ತು. ಆದರೆ ಬೆಳಗ್ಗೆಯೇ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಆಕಸ್ಮಿಕ ಹೃದಯಾಘಾತ ಸಂಭವಿಸಿದ್ದರಿಂದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಸ್ಮೃತಿ ಮಂದಾನ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಅವರು ಮಾಧ್ಯಮಗಳಿಗೆ ತಿಲಿಸಿದಂತೆ, ಇಂದು ಬೆಳಗ್ಗೆ ಸುಮಾರು 8:30ರ ಸುಮಾರಿಗೆ ಶ್ರೀನಿವಾಸ್ ಮಂದಾನ ತಿಂಡಿ ತಿನ್ನುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿತು. ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಭಾವಿಸಿದ್ದೆವು. ಆದರೆ ಕೆಲವೇ ನಿಮಿಷಗಳಲ್ಲಿ ನೋವು ತೀವ್ರಗೊಂಡಿತು, ಉಸಿರಾಟದ ತೊಂದರೆ ಕೂಡ ಶುರುವಾಯಿತು. ಯಾವುದೇ ರಿಸ್ಕ್ ತೆಗೆದುಕೊಳ್ಳಲಾಗದ ಕಾರಣ ಕೂಡಲೇ ಆಂಬುಲೆನ್ಸ್ ಕರೆಸಿ ಸಾಂಗ್ಲಿಯ ವಾನ್ಲೆಸ್‌ವಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ, ಆದರೆ ವೈದ್ಯರು 48 ಗಂಟೆಗಳ ಕಾಲ ನಿಗಾ ಇಟ್ಟು ವೀಕ್ಷಿಸುತ್ತಿದ್ದಾರೆ.

ಶ್ರೀನಿವಾಸ್ ಮಂಧಾನ ಅವರೇ ಸ್ಮೃತಿ ಮತ್ತು ಅವರ ಸಹೋದರ ಶ್ರವಣ್ ಅವರ ಕ್ರಿಕೆಟ್ ಪಯಣದ ಮೊದಲ ಗುರುಗಳು. ಸಾಂಗ್ಲಿಯಲ್ಲಿಯೇ ಚಿಕ್ಕ ವಯಸ್ಸಿನಿಂದಲೂ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತಾ ಬಂದಿದ್ದಾರೆ. ಈ ಕಾರಣದಿಂದಲೇ ಸ್ಮೃತಿ ತನ್ನ ಮದುವೆಯನ್ನು ತಂದೆಯವರ ಫಾರ್ಮ್‌ಹೌಸ್‌ನಲ್ಲಿ, ಅವರ ಆಶೀರ್ವಾದದೊಂದಿಗೆ ನೆರವೇರಿಸಬೇಕೆಂದು ಬಯಸಿದ್ದರು. ಆದರೆ ಈ ಆಕಸ್ಮಿಕ ಘಟನೆಯಿಂದಾಗಿ ಕುಟುಂಬದ ಎಲ್ಲ ಸದಸ್ಯರು ಆಸ್ಪತ್ರೆಯಲ್ಲೇ ಇದ್ದಾರೆ.

ವಿವಾಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಗಣ್ಯರು, ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳು ಸಾಂಗ್ಲಿಗೆ ಆಗಮಿಸಿದ್ದರು. ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗ್ಸ್, ರೇಣುಕಾ ಸಿಂಗ್ ಥಾಕೂರ್ ಸೇರಿದಂತೆ ಭಾರತ ತಂಡದ ಹಲವು ಆಟಗಾರ್ತಿಯರು, ಬಿಸಿಸಿಐ ಅಧಿಕಾರಿಗಳು, ಬಾಲಿವುಡ್‌ನ ಕೆಲವು ಸ್ನೇಹಿತರು ಆಗಮಿಸಿದ್ದರು. ಆದರೆ ಈ ದುಃಸ್ಥಿತಿಯಿಂದಾಗಿ ಎಲ್ಲ ಅತಿಥಿಗಳನ್ನು ವಾಪಸ್ ಕಳುಹಿಸಲಾಗಿದೆ. ಪಲಾಶ್ ಮುಚ್ಚಲ್ ಅವರ ಕುಟುಂಬ ಕೂಡ ಆಸ್ಪತ್ರೆಗೆ ಬಂದು ಸ್ಮೃತಿ ಕುಂಟುಂಬದವರಿಗೆ ಧೈರ್ಯ ಹೇಳಿದ್ದಾರೆ.

ಸ್ಮೃತಿ ಮತ್ತು ಪಲಾಶ್ ಅವರ ಪ್ರೇಮಕಥೆ ಈಗಾಗಲೇ ಸಾಕಷ್ಟು ಸುದ್ದಿಯಾಗಿತ್ತು. ಇಬ್ಬರೂ 2023ರಿಂದಲೇ ಸಂಬಂಧದಲ್ಲಿದ್ದು, 2024ರ ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪಲಾಶ್ ಅವರ ಸಂಗೀತ ಕ್ಷೇತ್ರದ ಸ್ನೇಹಿತರು ಮತ್ತು ಸ್ಮೃತಿಯ ಕ್ರಿಕೆಟ್ ಸ್ನೇಹಿತರು ಈ ಮದುವೆಗೆ ಉತ್ಸಾಹದಿಂದ ಕಾಯುತ್ತಿದ್ದರು. ಆದರೆ ಆಕಸ್ಮಿಕವಾಗಿ ಈ ದುರ್ಘಟನೆ ನಡೆದಿರುವುದು ಎಲ್ಲರಿಗೂ ಬೇಸರ ತಂದಿದೆ.

ತಂದೆ ಚೇತರಿಸಿಕೊಂಡ ತಕ್ಷಣ ಮತ್ತೆ ಮದುವೆಯ ದಿನಾಂಕ ನಿಗದಿಪಡಿಸುತ್ತೇವೆ. ಪ್ರಸ್ತುತ ಎಲ್ಲ ಪ್ರಾರ್ಥನೆಗಳು ಮತ್ತು ಶುಭಾಶಯಗಳು ಶ್ರೀನಿವಾಸ್ ಶರ್ಮರ ಶೀಘ್ರ ಚೇತರಿಕೆಗಾಗಿ ಇರಲಿ ಎಂದು ಸ್ಮೃತಿ ಮಂಧಾನ ಅವರ ಕುಟುಂಬದ ಪರವಾಗಿ ಮ್ಯಾನೇಜರ್ ತುಹಿನ್ ಮಿಶ್ರಾ ಮನವಿ ಮಾಡಿಕೊಂಡಿದ್ದಾರೆ.

Exit mobile version