ಕಳಪೆ ಫೀಲ್ಡಿಂಗ್: 358 ರನ್ ಗಳಿಸಿದರೂ ಭಾರತ ಸೋಲು ! ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಜಯ

Untitled design 2025 12 03T230049.152

ರಾಯ್‌ಪುರ: ರಾಯ್‌ಪುರದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಕದನದಲ್ಲಿ ಟೀಮ್ ಇಂಡಿಯಾ ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಏಡನ್‌ ಮಾರ್ಕ್ರಂ (Aiden Markram) ಅವರ ಮನಮೋಹಕ ಶತಕ ಮತ್ತು ಮಧ್ಯಮ ಕ್ರಮಾಂಕದ ಅಮೋಘ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸರಣಿಯು 1-1ರಲ್ಲಿ ಸಮಬಲಗೊಂಡಿದ್ದು, ಅಂತಿಮ ಪಂದ್ಯ ನಿರ್ಣಾಯಕವಾಗಿದೆ.

ಭಾರತದ ಇನ್ನಿಂಗ್ಸ್‌: ಶತಕಗಳ ಅಬ್ಬರ

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಬೃಹತ್ ಮೊತ್ತವಾದ 358 ರನ್‌ ಕಲೆಹಾಕಿತ್ತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ಯಶಸ್ವಿ ಜೈಸ್ವಾಲ್‌ (Yashasvi Jaiswal) ನಿರಾಸೆ ಮೂಡಿಸಿದರೂ, ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್‌ ಅವರ ಅಮೋಘ ಶತಕಗಳು ತಂಡಕ್ಕೆ ಭದ್ರ ಬುನಾದಿ ಹಾಕಿದವು.

ರೋಹಿತ್ (ಕೀಪರ್‌ಗೆ ಕ್ಯಾಚ್) ಮತ್ತು ಜೈಸ್ವಾಲ್ (22 ರನ್) ಬೇಗನೆ ಔಟಾದ ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಮೂರನೇ ವಿಕೆಟ್‌ಗೆ 195 ರನ್‌ಗಳನ್ನ ಜೊತೆಯಾಗಿ ಪೂರ್ಣಗೊಳಿಸಿದ್ದಾರೆ.

ರಾಹುಲ್ ಸ್ಪೋಟಕ ಬ್ಯಾಟಿಂಗ್:

ಕೊನೆಯ ಹಂತದಲ್ಲಿ ನಾಯಕ ಕೆ.ಎಲ್. ರಾಹುಲ್ (KL Rahul) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತದ ಮೊತ್ತ 350ರ ಗಡಿ ದಾಟಿತು. ರಾಹುಲ್ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 66 ರನ್ ಗಳಿಸಿದರು. ರವೀಂದ್ರ ಜಡೇಜಾ (Ravindra Jadeja) 24 ರನ್ ಗಳಿಸಿ ಸೋಲದೆ, ರಾಹುಲ್ ಜೊತೆ ಆರನೇ ವಿಕೆಟ್‌ಗೆ 69 ರನ್ ಗಳಿಸಿಕೊಟ್ಟರು.

ದಕ್ಷಿಣ ಆಫ್ರಿಕಾದ ಚೇಸಿಂಗ್‌: ಮಾರ್ಕ್ರಂ ಮಾಸ್ಟರ್‌ಕ್ಲಾಸ್‌

ಗೆಲುವಿಗೆ 359 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಕೇವಲ 49.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 362 ರನ್‌ ಗಳಿಸಿ ಗುರಿ ತಲುಪಿತು. ಆರಂಭದಲ್ಲಿ ಕ್ವಿಂಟನ್‌ ಡಿಕಾಕ್‌ ವಿಕೆಟ್ ಕಳೆದುಕೊಂಡರೂ, ಮಾರ್ಕ್ರಂ ನೇತೃತ್ವದಲ್ಲಿ ನಡೆದ ಮಧ್ಯಮ ಕ್ರಮಾಂಕದ ಜೊತೆಯಾಟಗಳು ಭಾರತದ ಕೈಯಿಂದ ಪಂದ್ಯವನ್ನು ಕಸಿದುಕೊಂಡವು.

ಪ್ರಮುಖ ಪಾಲುದಾರಿಕೆಗಳು:

ಪಂದ್ಯದ ಗೆಲುವಿನ ರೂವಾರಿ ಏಡನ್‌ ಮಾರ್ಕ್ರಂ, 98 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ 110 ರನ್ ಗಳಿಸಿದರು. ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್‌ ಮತ್ತು ಯುವ ಆಟಗಾರ ಡೇವಾಲ್ಡ್ ಬ್ರೇವಿಸ್ 34 ಎಸೆತಗಳಲ್ಲಿ 5 ಸಿಕ್ಸರ್‌ಗಳ ನೆರವಿನಿಂದ 54 ರನ್‌ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಕಾರ್ಬಿನ್ ಬಾಷ್ 15 ಎಸೆತಗಳಲ್ಲಿ ಗೆದ್ದು 29 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಭಾರತದ ಸೋಲಿಗೆ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಯಿತು. ಹಲವಾರು ಕ್ಯಾಚ್‌ಗಳನ್ನು ಕೈಚೆಲ್ಲಿದ ಟೀಮ್ ಇಂಡಿಯಾ, ರನೌಟ್ ಅವಕಾಶಗಳನ್ನು ಕಳೆದುಕೊಂಡಿತು. ಇದರ ಜೊತೆಗೆ ವೈಡ್‌ಗಳು, ನೋಬಾಲ್‌ಗಳು ಮತ್ತು ಲೆಗ್‌ಬೈಸ್‌ಗಳಿಂದ 18 ಅನಗತ್ಯ ರನ್‌ಗಳು ಹೆಚ್ಚುವರಿಯಾಗಿ ದಕ್ಷಿಣ ಆಫ್ರಿಕಾಕ್ಕೆ ಸೇರ್ಪಡೆಯಾಗಿ ತಂಡದ ಗೆಲುವಿಗೆ ನೆರವಾಯಿತು.

Exit mobile version