ಮುಂಬೈ: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟರ್ ಸ್ಮೃತಿ ಮಂದಾನ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶಕ ಮತ್ತು ಗಾಯಕ ಪಲಾಶ್ ಮುಚ್ಛಿಲ್ ಜೊತೆಯಾಗಿ ನವೆಂಬರ್ 23 ರಂದು ನಡೆಯಲಿರುವ ವಿವಾಹ ಸಮಾರಂಭದ ತಯಾರಿಗಳು ನಡೆಯುತ್ತಿವೆ. ಮದುವೆ ಮನೆ ಸಂಭ್ರಮ ಈಗಾಗಲೇ ಫುಲ್ ಜೋಶ್‌ನಲ್ಲಿದ್ದು, ಹಳದಿ ಶಾಸ್ತ್ರದಲ್ಲಿ ಇಬ್ಬರೂ ಒಟ್ಟಾಗಿ ಕುಣಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಭಾರತದ ಹಲವು ಕ್ರಿಕೆಟರ್‌ಗಳು, ಪ್ರಸಿದ್ಧ ಗಣ್ಯರು ಮತ್ತು ಕುಟುಂಬ ಸದಸ್ಯರು ಈ ಆಚರಣೆಗಳಲ್ಲಿ ಭಾಗವಹಿಸಿ ಉತ್ಸವದ ರಂಗೇರಿಸಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಅವರ ಪ್ರೇಮಕಥೆ ಹೊಸದೇನೂ ಅಲ್ಲ. ಇಬ್ಬರೂ 2019ರಿಂದಲೇ ಪರಸ್ಪರ ಪ್ರೀತಿಯಲ್ಲಿದ್ದರು. ಪಲಾಶ್ ಮುಚ್ಛಿಲ್ ಅವರು ಸ್ಮೃತಿಗೆ ಮಾಡಿದ ಅದ್ಭುತ ಪ್ರಪೋಸಲ್‌ನ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದ ನಂತರ, ಅದೇ ಮೈದಾನವನ್ನು ಪಲಾಶ್ ಅವರು ಪ್ರಪೋಸಲ್‌ಗೆ ಆಯ್ಕೆಮಾಡಿದ್ದು ವಿಶೇಷ. ಈ ಮೈದಾನ ಸ್ಮೃತಿಗೆ ಭಾವನಾತ್ಮಕವಾಗಿ ಬಹಳ ಮುಖ್ಯವಾಗಿದೆ, ಏಕೆಂದರೆ ಅಲ್ಲಿ ಅವರು ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದ್ದರು.
ವೀಡಿಯೊ ಆರಂಭವಾಗುವುದು ಪಲಾಶ್ ಸ್ಮೃತಿಯ ಕಣ್ಣುಗಳನ್ನು ರಿಬನ್‌ನಿಂದ ಮುಚ್ಚಿ ಮೈದಾನಕ್ಕೆ ಕರೆದುಕೊಂಡು ಬರುವ ದೃಶ್ಯವಿದ್ದು, ಮೈದಾನದ ಹಸಿರು ಹಾಸಿನಲ್ಲಿ ಇಬ್ಬರೂ ನಿಧಾನವಾಗಿ ನಡೆದು ಬರುತ್ತಿರುವಾಗ, ಅವರ ಹಿಂದೆ ದೊಡ್ಡ ಪುಷ್ಪಗುಚ್ಛ ಹಿಡಿದ ವ್ಯಕ್ತಿಯೊಬ್ಬನು ಹಿಂಬಾಲಿಸುವುದು ಗಮನ ಸೆಳೆಯುತ್ತದೆ. ಪಲಾಶ್ ಕ್ಲಾಸಿಕ್ ಸೂಟ್ ಧರಿಸಿದ್ದರೆ, ಸ್ಮೃತಿ ಗಾಢ ಕೆಂಪು ಗೌನ್‌ನಲ್ಲಿ ಮಿಂಚಿದ್ದಾರೆ.
ಪಲಾಶ್ ಕ್ಷಣದಲ್ಲೇ ಮಂಡಿಯೂರಿ, ಗುಲಾಬಿಗಳ ಪುಷ್ಪಗುಚ್ಛ ಮತ್ತು ವಜ್ರದ ಉಂಗುರ ಕೈಯಲ್ಲಿ ಹಿಡಿದು ಪ್ರಪೋಸ್ ಮಾಡುತ್ತಾರೆ. ಸಂಭ್ರಮದಲ್ಲಿ ತಕ್ಷಣವೇ ಕಣ್ಣೀರಾಗುವ ಸ್ಮೃತಿ, ಹೃದಯ ತುಂಬಿಕೊಂಡಂತೆ ಪಲಾಶ್ ಅವರನ್ನು ಅಪ್ಪಿಕೊಳ್ಳುತ್ತಾರೆ. ಈ ವಿಶೇಷ ಕ್ಷಣಕ್ಕೆ ಇಬ್ಬರ ಆಪ್ತರು ಮೈದಾನಕ್ಕೆ ಆಗಮಿಸಿ ಶುಭಾಶಯಗಳನ್ನು ಕೋರಿರುವ ದೃಶ್ಯ ಕೂಡ ಮನಸೆಳೆಯುತ್ತದೆ. ಕೊನೆಯಲ್ಲಿ ಜೋಡಿ ತಮ್ಮ ಎಂಗೇಜ್‌ಮೆಂಟ್ ರಿಂಗ್‌ಗಳನ್ನು ತೋರಿಸಿದ ವಿಡಿಯೋ ವೈರಲ್ ಆಗ್ತಿದೆ.
ಮದುವೆಯ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇನ್ನೊಂದು ದೃಶ್ಯ ಎಂದರೆ ‘ಹಳದಿ’ ಶಾಸ್ತ್ರ. ಹಳದಿ ಹಚ್ಚುವ ಕಾರ್ಯಕ್ರಮದಲ್ಲಿ ಸ್ಮೃತಿ ಮಂದಾನ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಕುಣಿದ ವಿಡಿಯೋ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ತಂಡದ ಕೆಲ ಕ್ರಿಕೆಟರ್‌ಗಳು ಕೂಡ ಈ ಆಚರಣೆಗಳಲ್ಲಿ ಹಾಜರಿದ್ದು, ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ. ಮದುವೆ ಸಮಾರಂಭಕ್ಕೆ ಹಲವಾರು ಸೆಲೆಬ್ರಿಟಿಗಳು, ಕ್ರೀಡಾ ಕ್ಷೇತ್ರದ ಅಭಿಮಾನಿಗಳು ಮತ್ತು ಸಂಗೀತ ಲೋಕದ ಗಣ್ಯರು ಆಗಮಿಸುವ ಸಾಧ್ಯತೆ ಇದೆ.
