ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ನಾಯಕ ಶುಭ್‌ಮನ್ ಗಿಲ್ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್ ದ್ವಿಶತಕ (222 ರನ್) ಬಾರಿಸಿದ ಗಿಲ್, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ, ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ 46 ವರ್ಷಗಳ ಹಿಂದಿನ ದಾಖಲೆಯನ್ನು (221 ರನ್, 1979, ದಿ ಓವಲ್) ಗಿಲ್ ಧೂಳಿಪಟ ಮಾಡಿದ್ದಾರೆ.
ಗಿಲ್ ಈ ದಾಖಲೆಯ ಇನ್ನಿಂಗ್ಸ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಗವಾಸ್ಕರ್ ಅವರ ದಾಖಲೆಯನ್ನು ಮುರಿದ ಗಿಲ್, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯರ ಶ್ರೇಷ್ಠತೆಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ (217 ರನ್, 2002, ದಿ ಓವಲ್) ಮತ್ತು ನಾಲ್ಕನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (193 ರನ್, 2002, ಲೀಡ್ಸ್) ಇದ್ದಾರೆ.
ಕೊಹ್ಲಿಯ ದಾಖಲೆ ಮುರಿದ ಗಿಲ್
ಗಿಲ್ ಸಾಧನೆ ಇಲ್ಲಿಗೆ ಸೀಮಿತವಾಗಿಲ್ಲ. ಎಡ್ಜ್‌ಬಾಸ್ಟನ್‌ನ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ 150 ರನ್‌ಗಳ ಗಡಿ ದಾಟಿದ ಕೂಡಲೇ, ಗಿಲ್ ವಿರಾಟ್ ಕೊಹ್ಲಿಯ ದಾಖಲೆಯನ್ನು (149 ರನ್, 2018, ಬರ್ಮಿಂಗ್ಹ್ಯಾಮ್) ಮುರಿದರು. ಈ ಇನ್ನಿಂಗ್ಸ್‌ನೊಂದಿಗೆ, ಬರ್ಮಿಂಗ್ಹ್ಯಾಮ್‌ನಲ್ಲಿ ಟೆಸ್ಟ್ ಪಂದ್ಯದಲ್ಲಿ 150 ರನ್‌ಗಳ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು.
ಭಾರತೀಯ ಟೆಸ್ಟ್ ನಾಯಕನ ದಾಖಲೆ
ಗಿಲ್ ಈ ದ್ವಿಶತಕವು ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು. ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಟೆಸ್ಟ್ ನಾಯಕ ಎಂಬ ಗೌರವಕ್ಕೆ ಗಿಲ್ ಭಾಜನರಾದರು. ಈ ಮೊದಲು, 1990 ರಲ್ಲಿ ಮೊಹಮ್ಮದ್ ಅಜರುದ್ದೀನ್ 179 ರನ್‌ಗಳ ಇನ್ನಿಂಗ್ಸ್ ಆಡಿದ್ದು, ಭಾರತೀಯ ಟೆಸ್ಟ್ ನಾಯಕನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ಗಿಲ್ ಈ ದಾಖಲೆಯನ್ನು ಮುರಿದು, ತಮ್ಮ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ತಾವೇ ದಿಗ್ಗಜ ಎಂಬುದನ್ನು ಸಾಬೀತುಪಡಿಸಿದ್ದಾರೆ.