ನವದೆಹಲಿ: ಮುಂಬೈ ಕ್ರಿಕೆಟ್ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, 2025–26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದು ಅವರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯಾಗಿದೆ.
ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಏಕದಿನ ತಂಡದ ಉಪನಾಯಕನಾಗಿದ್ದ ಶ್ರೇಯಸ್ ಅಯ್ಯರ್, ಫೀಲ್ಡಿಂಗ್ ಮಾಡುವ ಸಂದರ್ಭ ಕ್ಯಾಚ್ ಪಡೆಯಲು ಹೋಗಿ ಬಿದ್ದು ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಗಾಯ ಗಂಭೀರವಾಗಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳು ಐಸಿಯುನಲ್ಲಿಯೂ ಚಿಕಿತ್ಸೆ ಪಡೆದ ಅಯ್ಯರ್, ನಂತರ ಆಸ್ಟ್ರೇಲಿಯಾಗೆ ಮರಳಿ ವಿಶ್ರಾಂತಿ ಪಡೆದಿದ್ದರು. ಈ ಗಾಯದಿಂದಾಗಿ ಅವರು ಕೆಲವು ಪ್ರಮುಖ ಪಂದ್ಯಗಳಿಂದ ದೂರ ಉಳಿಯಬೇಕಾಯಿತು.
ಬಹಳ ದಿನಗಳ ವಿಶ್ರಾಂತಿಯ ನಂತರ ಇದೀಗ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದಾರೆ. ಫಿಟ್ನೆಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಬಳಿಕ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಇದರ ನಡುವೆಯೇ, ದೇಶೀಯ ಕ್ರಿಕೆಟ್‌ನ ಪ್ರಮುಖ ಟೂರ್ನಿಯಾದ ವಿಜಯ ಹಝಾರೆ ಟ್ರೋಫಿಯಲ್ಲಿ ಮುಂಬೈ ಪರವಾಗಿ ಮತ್ತೆ ಕಣಕ್ಕಿಳಿಯಲು ಅವರು ಸಿದ್ಧರಾಗಿದ್ದಾರೆ.
ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಆರಂಭದಲ್ಲಿ ಶಾರ್ದುಲ್ ಠಾಕೂರ್ ಮುನ್ನಡೆಸುತ್ತಿದ್ದರು. ಆದರೆ ಶಾರ್ದುಲ್ ಗಾಯಗೊಂಡ ಹಿನ್ನೆಲೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರನ್ನು ಮುಂಬೈ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಈ ಕುರಿತು ಮುಂಬೈ ತಂಡದ ಮುಖ್ಯ ಆಯ್ಕೆದಾರ ಸಂಜಯ್ ಪಾಟೀಲ್ ಮಾತನಾಡಿ, “ಶಾರ್ದುಲ್ ಠಾಕೂರ್ ಗಾಯಗೊಂಡಿದ್ದು, ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಶಿವಂ ದುಬೆ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಪ್ರಮುಖ ಆಟಗಾರರು ತಂಡದಲ್ಲಿ ಲಭ್ಯವಿದ್ದಾರೆ. ಆದರೆ ಉಳಿದ ಪಂದ್ಯಗಳಿಗೆ ಅನುಭವದ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ. ಶಾರ್ದುಲ್‌ಗೆ ಯಾವ ರೀತಿಯ ಗಾಯವಾಗಿದೆ ಎಂಬುದನ್ನು ಮಾತ್ರ ಅವರು ಸ್ಪಷ್ಟಪಡಿಸಲಿಲ್ಲ.
ಶ್ರೇಯಸ್ ಅಯ್ಯರ್ ಗಾಯದ ನಂತರ ತಮ್ಮ ಮೊದಲ ಪಂದ್ಯವನ್ನು ಜನವರಿ 6ರಂದು ಹಿಮಾಚಲ ಪ್ರದೇಶ ವಿರುದ್ಧದ ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ. ಇದರ ಬಳಿಕ ಜನವರಿ 8ರಂದು ಪಂಜಾಬ್ ವಿರುದ್ಧ ಮುಂಬೈ ತಂಡ ಸೆಣಸಡಾಲಿದೆ. ಈ ಎರಡೂ ಪಂದ್ಯಗಳಲ್ಲಿ ಅಯ್ಯರ್ ಕಣಕ್ಕಿಳಿಯಲಿದ್ದಾರೆ..
