ರಾಯಚೂರು: ಕಟ್ಟಡದ ಮೆಟ್ಟಿಲುಗಳ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಘಟನೆ ಹೇಗೆ ನಡೆಯಿತು?
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ವಿವಿಧ ಮಳಿಗೆಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರು ಇದ್ದಾರೆ. ಇಂದು ಎಂದಿನಂತೆ ಮಳಿಗೆಗಳು ತೆರೆದಿದ್ದು, ಸ್ಥಳೀಯರು ಮತ್ತು ಗ್ರಾಹಕರು ಆಗಮಿಸುತ್ತಿದ್ದರು. ಈ ವೇಳೆ ಏಕಾಏಕಿ ಮೆಟ್ಟಿಲುಗಳ ಸಮೀಪದ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದಿದೆ. ಆಗ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆಯೇ ಗೋಡೆಯ ತುಂಡುಗಳು ಉರುಳಿ ಬಿದ್ದಿವೆ.
ಕಟ್ಟಡದ ಅವಶೇಷಗಳಡಿ ಸಿಲುಕಿದ ನಾಲ್ವರು ಯುವಕರ ಪೈಕಿ ನಾಗರಾಜ್ ಕ್ಯಾದಿಗೇರಾ (26) ಮತ್ತು ರವಿಕುಮಾರ್ ಸಮುದ್ರ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ದೇವದುರ್ಗ ಪಟ್ಟಣದ ನಿವಾಸಿಗಳಾಗಿದ್ದು, ಸ್ಥಳೀಯ ವ್ಯಾಪಾರಿಗಳೊಂದಿಗೆ ಪರಿಚಯವಿತ್ತು ಎಂದು ತಿಳಿದುಬಂದಿದೆ.
ಪೋಸ್ಟರ್ ಅಂಟಿಸಲು ಹೋದ ವೇಳೆ ಅವಘಡ
ಮೃತರಿಬ್ಬರೂ ತಾವೇ ನಿರ್ಮಿಸಿದ ಕಿರುಚಿತ್ರದ (Short Film) ಪೋಸ್ಟರ್ ಅನ್ನು ಕಟ್ಟಡದ ಗೋಡೆಗೆ ಅಂಟಿಸಲು ಹೋಗಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಅವರು ಪೋಸ್ಟರ್ ಅಂಟಿಸುವ ಸಮಯದಲ್ಲಿಯೇ ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದು, ಅವರು ಅದರಡಿ ಸಿಲುಕಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಾಳುಗಳ ವಿವರ
ಅವಘಡದಲ್ಲಿ ಗಾಯಗೊಂಡಿರುವ ಉಮೇಶ್ ಮತ್ತು ಅಭಿಷೇಕ್ ಎಂಬುವವರಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಮತ್ತೊಬ್ಬ ಗಾಯಾಳು ಯುವಕನ ಸ್ಥಿತಿ ಗಂಭೀರವಾಗಿದ್ದು, ಅವನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆ ಆರಂಭ
ದೇವದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
