ಕ್ರಿಕೆಟರ್‌ ಶ್ರೇಯಸ್‌ ಅಯ್ಯರ್‌ ಐಸಿಯುನಿಂದ ವಾರ್ಡ್‌ಗೆ ಶಿಫ್ಟ್‌

Untitled design 2025 10 27t224938.261

ಟೀಂ ಇಂಡಿಯಾಗೆ ಹಾಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಸಿಡ್ನಿಯಿಂದ ಕೊನೆಗೂ ಸ್ವಲ್ಪ ಸಮಾಧಾನದ ಸುದ್ದಿ ಬಂದಿದೆ. ಇತ್ತೀಚೆಗೆ ಪಕ್ಕೆಲುಬಿನ ತೀವ್ರ ಗಾಯದಿಂದ ಸಿಡ್ನಿಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೇಯಸ್ ಅಯ್ಯರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಇದೀಗ ಅವರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹಾಗೂ ಬಿಸಿಸಿಐ ದೃಢಪಡಿಸಿವೆ.

31 ವರ್ಷದ ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವಿಶೇಷ ವೈದ್ಯಕೀಯ ತಂಡವೊಂದು ಸಿಡ್ನಿಯಲ್ಲೇ ಉಳಿದು, ಅಯ್ಯರ್ ಅವರ ಆರೋಗ್ಯವನ್ನು ನಿರಂತರವಾಗಿ ವಿಚಾರಿಸಿಕೊಳ್ಳುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲೇ ಈ ದುರಂತ ಘಟನೆ ನಡೆಯಿತು. ಆಸ್ಟ್ರೇಲಿಯಾ ತಂಡ ಮೊದಲ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ ಬಾಲ್ ಗಾಳಿಯಲ್ಲಿ ಎತ್ತರಕ್ಕೆ ಹಾರಿತು.

ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಅದ್ಭುತ ಡೈವ್ ಮಾಡಿ ಕ್ಯಾಚ್ ಹಿಡಿಯಲು ಹೋದರು. ಅಮೋಘ ಕ್ಯಾಚ್ ಹಿಡಿಯುವ ವೇಳೆ ಅವರು ನೆಲಕ್ಕೆ ಬಿದ್ದಾಗ ಎಡಭಾಗದ ಪಕ್ಕೆಲುಬಿಗೆ ಗಂಭೀರ ಪೆಟ್ಟು ಬಿದ್ದಿತು. ತಕ್ಷಣವೇ ಅವರು ನೆಲದಲ್ಲೇ ನೋವಿನಿಂದ ನರಳಿದರು. ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗಿದ ಬಳಿಕ ನೋವು ತೀವ್ರಗೊಂಡಿದ್ದು, ಬಿಸಿಸಿಐ ವೈದ್ಯಕೀಯ ತಂಡ ತುರ್ತುವಾಗಿ ಅವರನ್ನು ಸಿಡ್ನಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿತು.

ಗಾಯದಿಂದಾಗಿ ಪಕ್ಕೆಲುಬಿನ ಹತ್ತಿರ ರಕ್ತಸ್ರಾವ ಆಗಿದ್ದರಿಂದ, ಸೋಂಕು ಹರಡದಂತೆ ತೀವ್ರ ನಿಗಾದಲ್ಲಿ ಇರಿಸಲಾಯಿತು. ಎರಡು ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಶ್ರೇಯಸ್ ಅಯ್ಯರ್ ಸ್ಥಿತಿ ಉತ್ತಮವಾಗಿದ್ದು, ವೈದ್ಯರು ಅವರನ್ನು ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ. ವೈದ್ಯರು ಅಯ್ಯರ್‌ ಅವರನ್ನು ಇನ್ನೂ ಕೆಲವು ದಿನ ‘ಅಬ್ಸರ್ವೇಷನ್‌’ನಲ್ಲಿ ಇರಿಸುವ ನಿರ್ಧಾರ ಮಾಡಿದ್ದಾರೆ. ಸಂಪೂರ್ಣ ಚೇತರಿಕೆಗೆ ಕನಿಷ್ಠ ಮೂರು ವಾರಗಳು ಹಿಡಿಯಬಹುದು ಎಂದು ವೈದ್ಯಕೀಯ ತಂಡ ಅಭಿಪ್ರಾಯಪಟ್ಟಿದೆ.

ಬಿಸಿಸಿಐ ವೈದ್ಯಕೀಯ ವಿಭಾಗದ ಹಿರಿಯ ವೈದ್ಯರು ಸಿಡ್ನಿಯಲ್ಲೇ ನೆಲಸಿದ್ದಾರೆ. ಅಯ್ಯರ್‌ರ ಪಕ್ಕೆಲುಬಿನ ಎಕ್ಸ್‌ರೇ ಹಾಗೂ ಸಿಟಿ ಸ್ಕ್ಯಾನ್ ವರದಿಗಳ ಪ್ರಕಾರ ಯಾವುದೇ ಎಲುಬು ಮುರಿತ ಕಂಡುಬಂದಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ, ಅಯ್ಯರ್‌ ಅವರನ್ನು ಭಾರತಕ್ಕೆ ತರಲು ವೈದ್ಯಕೀಯ ವಿಮಾನ ಸಿದ್ಧವಾಗಿದೆ, ಆದರೆ ಅವರು ಸಂಪೂರ್ಣ ಚೇತರಿಸಿಕೊಂಡ ನಂತರ ಮಾತ್ರ ಸ್ಥಳಾಂತರಿಸಲಾಗುವುದು.

Exit mobile version