ICU ಯಿಂದ ವಾರ್ಡ್‌ಗೆ ಶಿಫ್ಟ್‌ ಆದ ಶ್ರೇಯಸ್ ಅಯ್ಯರ್..!

Untitled design 2025 10 28t151619.002

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಎಡಗಡೆಯ ಪಕ್ಕೆಲುಬಿನಲ್ಲಿ ಗಾಯವಾಗಿದ್ದು, ರಕ್ತಸ್ರಾವದಿಂದಾಗಿ ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದರು. ಇದೀಗ ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಗೊಂಡಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 26, 2025 ರಂದು ನಡೆದ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾದ ಬ್ಯಾಟರ್ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಓಡಿ ಅದ್ಭುತ ಕ್ಯಾಚ್‌ ಪಡೆದಿದ್ದರು. ಈ ಸಂದರ್ಭದಲ್ಲಿ ಅವರ ಎಡಗಡೆಯ ಪಕ್ಕೆಲುಬಿಗೆ ಗಾಯವಾಗಿದ್ದು, ಆಂತರಿಕ ರಕ್ತಸ್ರಾವ ಉಂಟಾಯಿತು. ತಕ್ಷಣವೇ ಸಿಡ್ನಿಯ ಆಸ್ಪತ್ರೆಗೆ ದಾಖಲಾದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಭಾರತೀಯ ತಂಡದ ವೈದ್ಯ ಡಾ. ರಿಜ್ವಾನ್ ಖಾನ್ ಅವರು ಶ್ರೇಯಸ್ ಅಯ್ಯರ್‌ಗೆ ನಿರಂತರ ಚಿಕಿತ್ಸೆ ನೀಡಿದ್ದಾರೆ. ಸೋಮವಾರದಿಂದ ಅವರ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಗೊಂಡಿದ್ದಾರೆ. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುವ ಸಾಧ್ಯತೆಯಿದೆ. ವೀಸಾ ಔಪಚಾರಿಕತೆಗಳು ಪೂರ್ಣಗೊಂಡ ನಂತರ ಅವರ ಕುಟುಂಬ ಸದಸ್ಯರು ಮುಂಬೈನಿಂದ ಸಿಡ್ನಿಗೆ ತೆರಳಬಹುದು ಎಂದು ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ, ಇಂದೋರ್‌ನಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಾದ ಆಶ್ಲೀ ಗಾರ್ಡ್ನರ್ ಮತ್ತು ಮೋನಿಕಾ ರೈಟ್‌ಗೆ ಲೈಂಗಿಕ ಕಿರುಕುಳದ ಘಟನೆ ನಡೆದಿದೆ. ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿದ್ದ ಈ ಇಬ್ಬರು ಆಟಗಾರ್ತಿಯರು, ಅಕ್ಟೋಬರ್ 23 ರಂದು ರಾಡಿಸನ್ ಬ್ಲೂ ಹೋಟೆಲ್‌ನಿಂದ ಕೆಫೆಗೆ ಜಾಗಿಂಗ್ ಮಾಡುತ್ತಿದ್ದಾಗ, ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ. ಈ ಘಟನೆಯ ಬಗ್ಗೆ ಆಸ್ಟ್ರೇಲಿಯಾ ತಂಡದ ಭದ್ರತಾ ವ್ಯವಸ್ಥಾಪಕ ಡ್ಯಾನಿ ಸಿಮ್ಮನ್ಸ್ ದೂರು ದಾಖಲಿಸಿದ್ದಾರೆ. ಇಂದೋರ್ ಪೊಲೀಸರು ಆರೋಪಿಯಾದ ಅಕೀಲ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ಘಟನೆಯ ನಂತರ, ಆಶ್ಲೀ ಗಾರ್ಡ್ನರ್ ಮತ್ತು ಮೋನಿಕಾ ರೈಟ್‌ಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಇಂದೋರ್‌ನ ಕೆಫೆಗೆ ಪೊಲೀಸ್ ಬೆಂಗಾವಲಿನೊಂದಿಗೆ ಕರೆದೊಯ್ಯಲಾಗಿದೆ. ಮೋನಿಕಾ ರೈಟ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಘಟನೆಯ ಬಗ್ಗೆ ಫೋಟೋ ಹಂಚಿಕೊಂಡಿದ್ದು, ಕೆಫೆಗೆ ಪೊಲೀಸ್ ಬೆಂಗಾವಲು ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಪೊಲೀಸರು ಜೊತೆಗೆ ಫೋಸ್ ಕೊಡುತ್ತಿರುವುದು ಕಾಣಿಸುತ್ತದೆ.

Exit mobile version