ಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಟೂರ್ನಿ ವಿಶೇಷವಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 12 ತಂಡಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಜಗತ್ತಿನ ಶ್ರೇಷ್ಠ ಮಹಿಳಾ ಕ್ರಿಕೆಟ್ ತಂಡಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿವೆ.
ಟೂರ್ನಿಯ ಉದ್ಘಾಟನಾ ಪಂದ್ಯ ಬರ್ಮಿಂಗ್‌ಹ್ಯಾಮ್‌ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡಲಿವೆ. ಈ ವಿಶ್ವಕಪ್ ಒಟ್ಟು 2 ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಟೂರ್ನಿಯಾಗಿದ್ದು, ಈ ಬಾರಿ 7 ವಿವಿಧ ಕ್ರೀಡಾಂಗಣಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಜುಲೈ 5ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
12 ತಂಡಗಳ ಎರಡು ಗುಂಪುಗಳ ವಿಂಗಡಣೆ
ಈ ಬಾರಿ ಟೂರ್ನಿಯ ವಿಶೇಷತೆ ಎಂದರೆ 12 ತಂಡಗಳ ಭಾಗವಹಿಸುವಿಕೆ. ಇವುಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನಲ್ಲಿ ತೀವ್ರ ಪೈಪೋಟಿ ನಡೆಯಲಿದ್ದು, ಟಾಪ್ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿವೆ.
ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವ ಪ್ರಮುಖ ಫೇವರಿಟ್‌ಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡ ಬಲಿಷ್ಠ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತ, ಈಗ ಟಿ20 ಮಾದರಿಯಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ಗುರಿಯೊಂದಿಗೆ ಸಜ್ಜಾಗಿದೆ.
ಭಾರತ ತಂಡಕ್ಕೆ ಪಾಕಿಸ್ತಾನ ಸವಾಲ್
ಭಾರತ ತಂಡಕ್ಕೆ ಮೊದಲ ದೊಡ್ಡ ಸವಾಲು ಎಂದರೆ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯ. ಜೂನ್ 14ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳ ಗಮನ ಹರಿದಿದೆ. ಈ ಪಂದ್ಯವು ಗುಂಪು ಹಂತದಲ್ಲೇ ಪಾಯಿಂಟ್ ಟೇಬಲ್ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಭಾರತ ತಂಡದಲ್ಲಿ ಅನುಭವ ಮತ್ತು ಯುವ ಶಕ್ತಿಯ ಸಮತೋಲನ ಕಂಡುಬರುತ್ತಿದೆ. ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ರಿಚಾ ಘೋಷ್ ಹಾಗೂ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಅವರಂತಹ ಆಟಗಾರ್ತಿಯರು ತಂಡದ ಪ್ರಮುಖ ಆಧಾರವಾಗಿದ್ದಾರೆ.
ಪಂದ್ಯಗಳು ಆರಂಭವಾಗುವ ಸಮಯ ಯಾವಾಗ?
ಭಾರತೀಯ ಕಾಲಮಾನಕ್ಕೆ ಅನುಸಾರವಾಗಿ ಮಧ್ಯಾಹ್ನ 3ಕ್ಕೆ, ಸಂಜೆ 7ಕ್ಕೆ, ರಾತ್ರಿ 11ಕ್ಕೆ ಪಂದ್ಯಗಳು ನಡೆಯಲಿವೆ.
ಬಂಪರ್ ಪ್ರಶಸ್ತಿ ಮೊತ್ತ
ಈ ವಿಶ್ವಕಪ್‌ನ ಮತ್ತೊಂದು ಪ್ರಮುಖ ಅಂಶ ಬಹುಮಾನ ಮೊತ್ತ. ಐಸಿಸಿ ಈ ಬಾರಿ ಒಟ್ಟು ಬಹುಮಾನವಾಗಿ ಭಾರಿ ಮೊತ್ತವನ್ನು ಘೋಷಿಸಿದ್ದು, ಚಾಂಪಿಯನ್ ತಂಡಕ್ಕೆ ಸುಮಾರು 22.4 ಕೋಟಿ ರೂಪಾಯಿ ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ 11.2 ಕೋಟಿ ರೂಪಾಯಿ ದೊರೆಯಲಿದೆ. ಸೆಮಿಫೈನಲ್‌ನಲ್ಲಿ ಸೋಲುವ ಎರಡು ತಂಡಗಳಿಗೆ ತಲಾ 6.46 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಜೊತೆಗೆ ಗುಂಪು ಹಂತದ ಪ್ರತಿ ಗೆಲುವಿಗೆ 29 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತಿದೆ.
