ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್..ಹೇಗೆ ಗೊತ್ತಾ..? ವಿಡಿಯೋ ಇಲ್ಲಿದೆ

Untitled design 2026 04 01T204128.367

ಮುಂಬೈ, ಏಪ್ರಿಲ್ 1: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ ಫೂಲ್ ದಿನದಂದು ತಮ್ಮ ಆತ್ಮೀಯ ಸ್ನೇಹಿತನಿಗೆ ಅದ್ಭುತ ಪ್ರಾಂಕ್ ಮಾಡಿದ್ದಾರೆ. ತಮ್ಮಂತೆಯೇ ಕಾಣುವ ವ್ಯಕ್ತಿಯೊಬ್ಬರನ್ನು ಕರೆಸಿ, ಸ್ನೇಹಿತನನ್ನು ದಾರಿ ತಪ್ಪಿಸಿದ ಈ ವಿಡಿಯೋವನ್ನು ಸಚಿನ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

“ನೀವು ಅವರಿಗೆ ತಮಾಷೆ ಮಾಡದೇ ಹೋದರೆ ಅವರು ನಿಮಗೆ ನಿಜವಾಗಿಯೂ ಸ್ನೇಹಿತರೇ?” ಎಂಬ ಶೀರ್ಷಿಕೆಯೊಂದಿಗೆ ಸಚಿನ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸಚಿನ್ ಅವರಂತೆ ಕಾಣುವ ಬಲ್ವೀರ್ ದರ್ಶನ್ ಚಂದ್ ಅವರು ಸೋಫಾದಲ್ಲಿ ಕುಳಿತಿರುತ್ತಾರೆ. ಇದೇ ವೇಳೆ ಸಚಿನ್ ಅವರ ಸ್ನೇಹಿತ ಆ ವ್ಯಕ್ತಿಯನ್ನೇ ಸಚಿನ್ ಎಂದು ಭಾವಿಸಿ ಹಿಂದಿನಿಂದ ಬಂದು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ.

ಆದರೆ ತಬ್ಬಿಕೊಂಡ ವ್ಯಕ್ತಿ ಸಚಿನ್ ಅಲ್ಲ ಎಂದು ತಿಳಿದಾಗ ಸ್ನೇಹಿತರ ಮುಖದಲ್ಲಿ ಮೂಡುವ ಆಘಾತ ಮತ್ತು ಮುಜುಗರದ ಅಭಿವ್ಯಕ್ತಿ ನೋಡಲೇಬೇಕು. ದರ್ಶನ್ ಚಂದ್ ಅವರು ಸಚಿನ್ ಪಾತ್ರದಲ್ಲಿದ್ದು, ತಬ್ಬಿಕೊಂಡಿದ್ದಕ್ಕೆ ತೀವ್ರ ಟೀಕೆ ಮಾಡುತ್ತಾರೆ. ಆಗ ಸ್ನೇಹಿತರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಾರೆ. ನಿಜವಾದ ಸಚಿನ್ ತೆಂಡೂಲ್ಕರ್ ಅಲ್ಲೇ ಇದ್ದು, ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಸರಿಯಾದ ಸಮಯಕ್ಕೆ ಅವರು ಎಂಟ್ರಿ ಕೊಟ್ಟು, ಮಾಡಿದ ಕುಚೇಷ್ಟೆಯನ್ನು ಬಹಿರಂಗಪಡಿಸಿ ಸ್ನೇಹಿತರನ್ನು ತಬ್ಬಿಕೊಂಡು ನಗುತ್ತಾರೆ.

ಸಚಿನ್ ಅವರ ಹಾಸ್ಯಪ್ರವೃತ್ತಿ
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ಅದರ ಹೊರಗೂ ತಮ್ಮ ಹಾಸ್ಯಪ್ರವೃತ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಸಹ ಆಟಗಾರರೊಂದಿಗೆ ತಮಾಷೆ ಮಾಡುವುದನ್ನು ಅನೇಕ ಬಾರಿ ಕಾಣಬಹುದಾಗಿತ್ತು. ಈ ಬಾರಿ ಏಪ್ರಿಲ್ ಫೂಲ್ ದಿನದಂದು ಅವರು ತಮ್ಮ ಆಪ್ತ ಸ್ನೇಹಿತನಿಗೆ ಮಾಡಿರುವ ಈ ಪ್ರಾಂಕ್ ಅಭಿಮಾನಿಗಳ ಮನಗೆದ್ದಿದೆ.

ಲುಕ್ ಅಲೈಕ್ ಸಂಸ್ಕೃತಿ
ಪ್ರಪಂಚದಲ್ಲಿ ಒಂದೇ ರೀತಿ ಕಾಣುವ 7 ಜನರಿರುತ್ತಾರೆ ಎಂಬ ಮಾತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಂತೆ ಕಾಣುವ ಹಲವು ವ್ಯಕ್ತಿಗಳಿದ್ದಾರೆ… ಐಶ್ವರ್ಯಾ ರೈ, ಕರೀನಾ ಕಪೂರ್, ಶ್ರೀದೇವಿ ಅವರಂತೆ ಕಾಣುವ ಯುವತಿಯರು, ಪ್ರಧಾನಿ ನರೇಂದ್ರ ಮೋದಿಯಂತೆ ಕಾಣುವ ವ್ಯಕ್ತಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಸಚಿನ್ ಅವರಂತೆ ಕಾಣುವ ಬಲ್ವೀರ್ ದರ್ಶನ್ ಚಂದ್ ಸಹ ಇಂತಹ ಲುಕ್ ಅಲೈಕ್ ಗಳಲ್ಲಿ ಒಬ್ಬರು. ಸಚಿನ್ ಅವರು ತಮ್ಮ ಸ್ನೇಹಿತನಿಗೆ ಪ್ರಾಂಕ್ ಮಾಡಲು ಇದೇ ವ್ಯಕ್ತಿಯನ್ನು ಬಳಸಿಕೊಂಡಿದ್ದಾರೆ.

ವೈರಲ್ ವಿಡಿಯೋ
ಸಚಿನ್ ಹಂಚಿಕೊಂಡ ಈ ವಿಡಿಯೋಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ಸಚಿನ್ ಸರ್ ನಿಜಕ್ಕೂ ತುಂಟರು”, “ಇಷ್ಟು ವರ್ಷಗಳ ನಂತರವೂ ಇವರ ತಮಾಷೆ ಹಾಗೆಯೇ ಇದೆ”, “ಸ್ನೇಹಿತರ ಮುಖಭಾವ ನೋಡಿ ನಾವೇ ನಕ್ಕುಬಿಟ್ಟೆವು” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕ್ರಿಕೆಟ್ ದಿಗ್ಗಜನ ಈ ತುಂಟಾಟ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Exit mobile version