ಹಿಟ್‌ಮ್ಯಾನ್ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆಗೆ 18 ವರ್ಷಗಳು!

4112 (5)

ನವದೆಹಲಿ: ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕ, ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ತಮ್ಮ 18 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಸಂಭ್ರಮದಿಂದ ಪೂರೈಸಿದ್ದಾರೆ. 2007ರ ಜೂನ್ 23ರಂದು ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಗೆದ್ದಿದ್ದರಿಂದ ರೋಹಿತ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಆ ತಂಡದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್ ರಂತಹ ದಿಗ್ಗಜರು ಇದ್ದರು.

ಮೂರು ದಿನಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಮೊದಲ ಬಾರಿಗೆ ಬ್ಯಾಟ್ ಬೀಸಿದರು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು 9 ಎಸೆತಗಳಲ್ಲಿ 8 ರನ್ ಗಳಿಸಿದರು. ಈ ಚೊಚ್ಚಲ ಪಂದ್ಯದಿಂದ ಆರಂಭವಾದ ಅವರ ಪಯಣ ಇಂದು ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಯ ಸರದಾರನ ಸ್ಥಾನ ಪಡೆದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿ ಮುಕ್ತಾಯದ ಬಳಿಕ ದುಬೈನಲ್ಲಿ ಕುಟುಂಬದೊಂದಿಗೆ ವಿಶ್ರಾಂತಿಯಲ್ಲಿರುವ ರೋಹಿತ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೆಲ್ಮೆಟ್ ಫೋಟೋ ಹಂಚಿಕೊಂಡು, “ಭಾರತದ ಪರ ಸುದೀರ್ಘ ಕಾಲ ಆಡಲು ಸಿಕ್ಕ ಅವಕಾಶಕ್ಕೆ ಕೃತಜ್ಞನಾಗಿದ್ದೇನೆ” ಎಂದಿದ್ದಾರೆ.

ಏಕದಿನ ಕ್ರಿಕೆಟ್‌ನ ದಾಖಲೆ

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಮೂರು ದ್ವಿಶತಕಗಳನ್ನು ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 2014ರಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ 264 ರನ್‌ಗಳು ಏಕದಿನ ಕ್ರಿಕೆಟ್‌ನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 273 ಏಕದಿನ ಪಂದ್ಯಗಳಿಂದ 11,168 ರನ್ ಗಳಿಸಿರುವ ರೋಹಿತ್, 32 ಶತಕ ಮತ್ತು 58 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಸಿಸಿ ಟ್ರೋಫಿಗಳ ಜಯ

ವಿರಾಟ್ ಕೊಹ್ಲಿಯ ನಂತರ ಭಾರತದ ಮೂರು ಮಾದರಿಯ ಕ್ರಿಕೆಟ್‌ನ ನಾಯಕನಾದ ರೋಹಿತ್, ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 6 ರನ್‌ಗಳಿಂದ ಸೋಲಿಸಿ ಭಾರತಕ್ಕೆ ಎರಡನೇ ಟಿ20 ವಿಶ್ವಕಪ್ ಗೆದ್ದುಕೊಟ್ಟರು. 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಎಂಎಸ್ ಧೋನಿಯಂತೆ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ಎರಡನೇ ಭಾರತೀಯ ನಾಯಕರಾದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಂಡವನ್ನು ಕೊಂಡೊಯ್ದರೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದರು. ಈಗ 2027ರ ಏಕದಿನ ವಿಶ್ವಕಪ್ ಗೆದ್ದು ಮತ್ತೊಂದು ಟ್ರೋಫಿ ಗೆಲ್ಲುವ ಗುರಿಯಲ್ಲಿದ್ದಾರೆ.

Exit mobile version