ಗ್ರೇಟರ್ ನೋಯಿಡಾ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಚಂದ್ರ ಸಿಂಗ್ ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಗ್ರೇಟರ್ ನೋಯಿಡಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕುಟುಂಬದ ಆಧಾರಸ್ತಂಭವಾಗಿದ್ದ ಖಚಂದ್ರ ಸಿಂಗ್ ಅವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ರಿಂಕು ಸಿಂಗ್ ಅವರ ಕ್ರಿಕೆಟ್ ಜೀವನದಲ್ಲಿ ತಂದೆಯ ಪಾತ್ರ ಅಪಾರವಾಗಿತ್ತು. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನ ಕನಸುಗಳಿಗೆ ಬೆಂಬಲವಾಗಿ ನಿಂತಿದ್ದ ಅವರು, ಸದಾ ಮಗನ ಸಾಧನೆಗಾಗಿ ಹಾರೈಸುತ್ತಿದ್ದರು.
ಕೊನೆಯ ದಿನಗಳಲ್ಲಿ ಗಂಭೀರ ಸ್ಥಿತಿ
ವೈದ್ಯಕೀಯ ಮೂಲಗಳ ಪ್ರಕಾರ, ಖಚಂದ್ರ ಸಿಂಗ್ ಅವರಿಗೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ದೃಢಪಟ್ಟಿತ್ತು. ರೋಗವು ಇಡೀ ದೇಹಕ್ಕೆ ಹರಡಿದ್ದರಿಂದ ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಕೊನೆಯ ಕೆಲವು ದಿನಗಳಲ್ಲಿ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದರು. ಮೂತ್ರಪಿಂಡ ವೈಫಲ್ಯದ ಹಿನ್ನೆಲೆ ನಿರಂತರ ಮೂತ್ರಪಿಂಡ ಬದಲಿ ಚಿಕಿತ್ಸೆ (CRRT) ನೀಡಲಾಗುತ್ತಿತ್ತು.
ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದರೂ, ಚಿಕಿತ್ಸೆ ಫಲ ನೀಡಲಿಲ್ಲ. ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿಧನರಾದರು ಎಂದು ತಿಳಿದುಬಂದಿದೆ.
ಪಂದ್ಯ ಮಧ್ಯದಲ್ಲೇ ಹೊರಟ ರಿಂಕು
ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಜೊತೆಗಿದ್ದ ರಿಂಕು ಸಿಂಗ್ ಅವರಿಗೆ ತಂದೆಯ ಆರೋಗ್ಯ ಹದಗೆಟ್ಟ ಮಾಹಿತಿ ಸಿಕ್ಕ ತಕ್ಷಣವೇ ಅವರು ತಂಡವನ್ನು ತೊರೆದು ಸ್ವಗ್ರಾಮಕ್ಕೆ ಧಾವಿಸಿದ್ದರು. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ನಡೆಯಬೇಕಿದ್ದ ಪಂದ್ಯಕ್ಕೂ ಮುನ್ನವೇ ಅವರು ತುರ್ತಾಗಿ ಮನೆಗೆ ಪ್ರಯಾಣ ಬೆಳೆಸಿದ್ದರು.
ತಂದೆಯೊಂದಿಗೆ ಕೊನೆಯ ಕ್ಷಣಗಳಲ್ಲಿ ಇರಬೇಕೆಂಬ ಮನಸ್ಸಿನಿಂದ ಅವರು ತಂಡದ ನಿರ್ವಹಣೆಯ ಅನುಮತಿ ಪಡೆದು ಹೊರಟಿದ್ದರು.
ಕ್ರಿಕೆಟ್ ವಲಯದಲ್ಲಿ ಸಂತಾಪ
ರಿಂಕು ಸಿಂಗ್ ತಂದೆಯ ಅಗಲಿಕೆಯ ಸುದ್ದಿ ತಿಳಿದ ತಕ್ಷಣವೇ ಕ್ರಿಕೆಟ್ ವಲಯದ ಗಣ್ಯರು, ಸಹ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಮಗನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದ ತಂದೆಯ ಸಾಧನೆಗೆ ಎಲ್ಲರೂ ಕೃತಜ್ಞತೆ ಸಲ್ಲಿಸಿದ್ದಾರೆ.
ರಿಂಕು ಸಿಂಗ್ ಕ್ರಿಕೆಟ್ ಪಯಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ತಂಡದಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡವರು. ಅವರ ಸಾಧನೆಗಳ ಹಿಂದೆ ತಂದೆಯ ಪ್ರೋತ್ಸಾಹ ಮತ್ತು ಬೆಂಬಲ ಪ್ರಮುಖವಾಗಿತ್ತು.
