ಕ್ಲೈಮ್ಯಾಕ್ಸ್ ಹಂತಕ್ಕೆ ಬಂದೇಬಿಡ್ತಾ ಕುರ್ಚಿ ಫೈಟ್!?: ಖಾಸಗಿ ಹೋಟೆಲ್‌ನಲ್ಲಿ ಡಿಕೆಶಿ ಬೆಂಬಲಿಗರ ಸಭೆ

Untitled design 2026 02 27T091819.807

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತೀವ್ರಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಶಾಸಕರು ಬೆಂಗಳೂರಿನ ಮೆಖ್ರಿ ಸರ್ಕಲ್ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಮೀಟಿಂಗ್ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಅಧಿಕೃತವಾಗಿ ಇದು ಮಾಗಡಿ ಶಾಸಕ ಹೆಚ್‌.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಔತಣ ಎಂದು ಹೇಳಲಾಗಿದ್ದು, ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಗಂಭೀರ ಚರ್ಚೆ ನಡೆದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ, ಡಿಕೆಶಿ ಬೆಂಬಲಿಗರು ಸುಮಾರು 60ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದ್ದರು. ಅವರಲ್ಲಿ 40 ಮಂದಿ ಸಭೆಯಲ್ಲಿ ಭಾಗವಹಿಸಿದ್ದರೆ, ಇನ್ನೂ ಕೆಲವರು ಮದುವೆ, ವಿದೇಶ ಪ್ರವಾಸ ಸೇರಿದಂತೆ ವೈಯಕ್ತಿಕ ಕಾರಣಗಳಿಂದ ಗೈರಾಗಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಭಾಗವಹಿಸಿದವರು ಯಾರು?

ಸಭೆಯಲ್ಲಿ ಭಾಗವಹಿಸಿದವರಲ್ಲಿ ಸಿ.ಪಿ. ಯೋಗೇಶ್ವರ್, ಕುಣಿಗಲ್ ರಂಗನಾಥ್, ಆನೇಕಲ್ ಶಿವಣ್ಣ, ಪಾವಗಡ ವೆಂಕಟೇಶ್, ಮದ್ದೂರು ಉದಯ್ ಗೌಡ, ಮಂಥರ್ ಗೌಡ, ಬಸವರಾಜ ಶಿವಗಂಗಾ, ಶರತ್ ಬಚ್ಚೇಗೌಡ, ಗಣಿಗ ರವಿಕುಮಾರ್, ಹೊನ್ನಾಳಿ ಶಾಂತನಗೌಡ ಸೇರಿದಂತೆ ಹಲವು ಶಾಸಕರು ಇದ್ದರು. ಸಚಿವರಾದ ಡಿ. ಸುಧಾಕರ್, ಮಂಕಾಳು ಸುಬ್ಬ ವೈದ್ಯ, ಪ್ರಕಾಶ್ ಕೋಳಿವಾಡ, ನಯನ ಮೋಟಮ್ಮ ಸೇರಿದಂತೆ ಪ್ರಮುಖ ಮುಖಂಡರೂ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಡಿಕೆಶಿ ಬೆಂಬಲಿಗರೆಂದೇ ಗುರುತಿಸಿಕೊಂಡವರಾಗಿದ್ದಾರೆ.

ಹುಟ್ಟುಹಬ್ಬದ ಸಂಭ್ರಮಾಚರಣೆಯ ನಂತರ ಸುಮಾರು 18 ಮಂದಿ ಶಾಸಕರು ಒಟ್ಟಾಗಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿಎಂ ಸ್ಥಾನ ಕುರಿತು ಗಂಭೀರ ಚರ್ಚೆ?

ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತಾಗಿ ಸ್ಪಷ್ಟ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವದ ಗೊಂದಲಕ್ಕೆ ಅಂತಿಮ ತೆರೆ ಎಳೆಯಬೇಕು ಎಂಬ ಅಭಿಪ್ರಾಯ ಬಹುತೇಕ ಶಾಸಕರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಭೇಟಿಗೆ ಸಿದ್ಧತೆ?

ಡಿಕೆಶಿ ಬೆಂಬಲಿಗರು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಮಾರು 70ಕ್ಕೂ ಹೆಚ್ಚು ಶಾಸಕರು ಒಟ್ಟಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನ ಕುರಿತು ಅಂತಿಮ ನಿರ್ಧಾರದ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳುತ್ತಿವೆ. ಮೊದಲು ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಡೆಸಿ, ನಂತರ ದೆಹಲಿ ಪ್ರವಾಸಕ್ಕೆ ದಿನಾಂಕ ನಿಗದಿಪಡಿಸುವ ಯೋಚನೆ ನಡೆಯುತ್ತಿದೆ ಎನ್ನಲಾಗಿದೆ.

Exit mobile version