ಡಿಕೆಶಿ ಭೇಟಿಯಾದ ಅನಿಲ್ ಕುಂಬ್ಳೆ: RCB ಕಪ್ ಗೆಲ್ಲುವ ನಿರೀಕ್ಷೆ ಇದೆ ಎಂದ ಮಾಜಿ ಕ್ರಿಕೆಟಿಗ

Untitled design 2025 04 18t141024.780

ಬೆಂಗಳೂರು, ಏಪ್ರಿಲ್ 18: ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ 34ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿವೆ. ಆರ್‌ಸಿಬಿಗೆ ಇದು ತವರು ಮೈದಾನದಲ್ಲಿ ಗೆಲುವಿನ ಕಾತರದ ಪಂದ್ಯವಾಗಿದ್ದು, ಪಂಜಾಬ್ ತಂಡವೂ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ.

ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇಂದು ಬೆಳಿಗ್ಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಭೇಟಿಯ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ಇಂದು ನನ್ನ ನಿವಾಸದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವ ಹೆಮ್ಮೆಯ ಕನ್ನಡಿಗನೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡು ಸಂತಸವಾಗಿದೆ,” ಎಂದು ಅವರು ಬರೆದುಕೊಂಡಿದ್ದಾರೆ.

ವೈಯಕ್ತಿಕ ಭೇಟಿ, ಆದರೆ ಕ್ರಿಕೆಟ್ ಮಾತು ಅನಿವಾರ್ಯ: ಕುಂಬ್ಳೆ

ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಕುಂಬ್ಳೆ, “ನಾನು ವೈಯುಕ್ತಿಕ ಕಾರಣಕ್ಕಾಗಿ ಡಿಸಿಎಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಯಾವುದೇ ರಾಜಕೀಯ ಅಥವಾ ಅಧಿಕೃತ ಉದ್ದೇಶವಲ್ಲ,” ಎಂದು ಸ್ಪಷ್ಟಪಡಿಸಿದರು.

ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, “RCB ಈ ಬಾರಿ ಉತ್ತಮವಾಗಿ ಆಡುತ್ತಿದೆ. ಟೂರ್ನಿಯಲ್ಲಿ ಇನ್ನೂ ಅರ್ಧ ಭಾಗ ಬಾಕಿಯಿದೆ. ಬೆಂಗಳೂರಿನಲ್ಲಿ ಇನ್ನೂ ಪಂದ್ಯ ಗೆದ್ದಿಲ್ಲ ಆದರೆ ತಂಡದ ಒಟ್ಟಾರೆ ಪ್ರದರ್ಶನ ನೋಡಿದರೆ, ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆ ಇದೆ,” ಎಂದು ಭರವಸೆ ವ್ಯಕ್ತಪಡಿಸಿದರು.

ಈ ದಿನದ ಪಂದ್ಯದಲ್ಲಿ RCB ಮತ್ತು PBKS ನಡುವೆ ಯಾರು ಗೆಲ್ಲಬಹುದೆಂದು ಕೇಳಿದಾಗ, ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದು, “ನಾನು ಎರಡೂ ತಂಡಗಳಲ್ಲಿಯೂ ಇದ್ದೆ. ಆದ್ದರಿಂದ ಎರಡೂ ತಂಡಗಳಿಗೆ ಆಲ್ ದಿ ಬೆಸ್ಟ್,” ಎಂದು  ಉತ್ತರಿಸಿದರು.

ಅನಿಲ್ ಕುಂಬ್ಳೆ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ RCB ಹಾಗೂ PBKS ಎರಡೂ ತಂಡಗಳಿಗೆ ಕೋಚ್ ಮತ್ತು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅವರ ಅನುಭವ ಎರಡೂ ತಂಡಗಳ ಆಟಗಾರರಿಗೆಲ್ಲ ಮಾರ್ಗದರ್ಶಕವಾಗಿದ್ದವು.

Exit mobile version