ಪಾಕ್ ಕ್ರಿಕೆಟರ್‌‌ ಖರೀದಿಸಿದ ಕಾವ್ಯಾ ಮಾರನ್‌ಗೆ ಬ್ಯಾನ್ ಬಿಸಿ: ಸನ್‌ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಸಸ್ಪೆಂಡ್

Untitled design 2026 03 13T115113.450

ಹೈದರಾಬಾದ್: ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರಿಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್‌ನಲ್ಲಿ ಕಾವ್ಯಾ ಅವರ ಒಡೆತನದ ಸನ್ ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.35 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲ, ಸನ್ ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನೇ ಸಸ್ಪೆಂಡ್ ಮಾಡಲಾಗಿದೆ.

ಆಕ್ಷನ್‌ನಲ್ಲಿ 2.35 ಕೋಟಿ ರೂ.ಗೆ ಅಬ್ರಾರ್ ಖರೀದಿ

ಮಾರ್ಚ್ 12 ರಂದು ನಡೆದ ದಿ ಹಂಡ್ರೆಡ್ ಲೀಗ್ ಆಕ್ಷನ್‌‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.35 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ವೇಳೆ ತಂಡದ ಮಾಲಕಿ ಕಾವ್ಯಾ ಮಾರನ್ ಹಾಗೂ ತಂಡದ ಕೋಚ್ ಡ್ಯಾನಿಯಲ್ ವಿಟ್ಟೋರಿ ಹಾಜರಿದ್ದರು.

ಅಬ್ರಾರ್ ಅಹ್ಮದ್ ಪಾಕಿಸ್ತಾನ ಪರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಿಸ್ಟರಿ ಸ್ಪಿನ್ನರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅವರ ಸ್ಪಿನ್ ಬೌಲಿಂಗ್ ಕೌಶಲ್ಯದಿಂದಾಗಿ ಅನೇಕ ಫ್ರಾಂಚೈಸಿಗಳು ಆಸಕ್ತಿ ತೋರಿದ್ದರೂ, ಅಂತಿಮವಾಗಿ ಸನ್‌ರೈಸರ್ಸ್ ಲೀಡ್ಸ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಈ ನಿರ್ಧಾರವೇ ಅನಿರೀಕ್ಷಿತ ವಿವಾದಕ್ಕೆ ಕಾರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಹಾಗೂ ಕ್ರೀಡಾ ಸಂಬಂಧಗಳ ಹಿನ್ನೆಲೆ ಈ ನಿರ್ಧಾರಕ್ಕೆ ಕೆಲ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಭಾರತೀಯ ಅಭಿಮಾನಿಗಳಲ್ಲಿ ಕೆಲವರು ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದರು.

ಸನ್‌ರೈಸರ್ಸ್ ಲೀಡ್ಸ್ ತಂಡವು ಅಬ್ರಾರ್ ಅಹ್ಮದ್ ಅವರನ್ನು ಸ್ವಾಗತಿಸುವ ಪೋಸ್ಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ, ಸಾವಿರಾರು ಕಾಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳು ಬಂದವು. ಕೆಲವರು ಕಾವ್ಯಾ ಮಾರನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ #BanKavyaMaran ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಮಾಡಿಸಿದರು.

ಟ್ವಿಟರ್ ಖಾತೆ ಸಸ್ಪೆಂಡ್

ಮಾರ್ಚ್ 13ರ ಬೆಳಿಗ್ಗೆ ಸನ್‌ರೈಸರ್ಸ್ ಲೀಡ್ಸ್ ಅಧಿಕೃತ ಟ್ವಿಟರ್ ಖಾತೆ ತೆರೆಯಲು ಪ್ರಯತ್ನಿಸಿದಾಗ “This account has been suspended” ಎಂಬ ಸಂದೇಶ ಕಾಣಿಸಿಕೊಂಡಿದೆ. ಈ ಖಾತೆ ಏಕೆ ಸ್ಥಗಿತಗೊಂಡಿದೆ ಎಂಬುದರ ಕುರಿತು ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದೊಡ್ಡ ಪ್ರಮಾಣದಲ್ಲಿ ಖಾತೆಯನ್ನು ರಿಪೋರ್ಟ್ ಮಾಡಿದ ಪರಿಣಾಮ ಈ ಕ್ರಮವಾಗಿರಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ಭಾರತದಲ್ಲಿ ಪಾಕ್ ಆಟಗಾರರ ಮೇಲಿನ ನಿರ್ಬಂಧ ಹಿನ್ನೆಲೆ

ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟರ್‌ಗಳಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಇಲ್ಲ. 2008ರ ನಂತರದಿಂದ ಪಾಕಿಸ್ತಾನದ ಆಟಗಾರರನ್ನು ಐಪಿಎಲ್ ತಂಡಗಳು ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸೋದರ ಸಂಸ್ಥೆಯಾಗಿರುವ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನ ಆಟಗಾರನನ್ನು ಖರೀದಿಸಿರುವುದು ಕೆಲ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿಸಿದೆ.

ಆದರೆ ದಿ ಹಂಡ್ರೆಡ್ ಲೀಗ್ ಇಂಗ್ಲೆಂಡ್‌ನಲ್ಲಿ ನಡೆಯುವ ಟೂರ್ನಮೆಂಟ್ ಆಗಿದ್ದು, ಅಲ್ಲಿ ಪಾಕಿಸ್ತಾನ ಆಟಗಾರರಿಗೆ ಯಾವುದೇ ನಿರ್ಬಂಧವಿಲ್ಲ. ಆದ್ದರಿಂದ ಫ್ರಾಂಚೈಸಿಗಳಿಗೆ ಅಂತಾರಾಷ್ಟ್ರೀಯ ಆಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ.

Exit mobile version