ಆರ್‌ಸಿಬಿಗೆ ಬಿಗ್ ಶಾಕ್: ಟೂರ್ನಿಯಿಂದ ಪಡಿಕ್ಕಲ್ ಔಟ್, ಮತ್ತೊಬ್ಬ ಕನ್ನಡಿಗ ಎಂಟ್ರಿ

Untitled design (68)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ 2025ರಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಪ್ಲೇಆಫ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಸೋಲುಗಳೊಂದಿಗೆ 16 ಅಂಕಗಳನ್ನು ಕಲೆಹಾಕಿರುವ ಆರ್‌ಸಿಬಿ, ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಪ್ಲೇಆಫ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ನಡುವೆ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ದೇವದತ್ ಪಡಿಕ್ಕಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಕನ್ನಡಿಗ, ಮಯಾಂಕ್ ಅಗರ್ವಾಲ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ ಎಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದೆ.

ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡವು ಆಕರ್ಷಕ ಕ್ರಿಕೆಟ್ ಆಡಿದ್ದು, ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನ ಕಾಯ್ದುಕೊಂಡಿದೆ. ಆದರೆ, ಪ್ಲೇಆಫ್ ಹತ್ತಿರವಾಗುತ್ತಿದ್ದಂತೆ ಆಟಗಾರರ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿದೆ. ಈಗಾಗಲೇ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಜ್ವರದಿಂದಾಗಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಕೂಡ ಗಾಯದಿಂದ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಇದರ ಜೊತೆಗೆ, ನಾಯಕ ರಜತ್ ಪಾಟಿದಾರ್ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇದೀಗ ಪಡಿಕ್ಕಲ್‌ರ ಇಂಜುರಿಯಿಂದ ಆರ್‌ಸಿಬಿಯ ಬ್ಯಾಟಿಂಗ್‌ಗೆ ದೊಡ್ಡ ಹೊಡೆತವಾಗಿದೆ.

ದೇವದತ್ ಪಡಿಕ್ಕಲ್ ಈ ಸೀಸನ್‌ನಲ್ಲಿ ಆರ್‌ಸಿಬಿಯ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದರು. 10 ಪಂದ್ಯಗಳಲ್ಲಿ 247 ರನ್‌ಗಳನ್ನು ಗಳಿಸಿದ್ದ ಅವರು, ಎರಡು ಅರ್ಧಶತಕಗಳೊಂದಿಗೆ ತಂಡಕ್ಕೆ ಸ್ಥಿರತೆಯನ್ನು ಒದಗಿಸಿದ್ದರು. ಆರ್‌ಸಿಬಿಯ ಟಾಪ್ ಆರ್ಡರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಡಿಕ್ಕಲ್, ತಂಡದ ಯಶಸ್ಸಿನಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಆದರೆ, ಮಂಡಿರಜ್ಜು ಗಾಯದಿಂದಾಗಿ ಅವರು ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯುವುದು ತಂಡಕ್ಕೆ ಭಾರೀ ನಷ್ಟವನ್ನುಂಟುಮಾಡಿದೆ.

ಪಡಿಕ್ಕಲ್‌ರ ಬದಲಿಗೆ ತಂಡಕ್ಕೆ ಸೇರಿರುವ ಮಯಾಂಕ್ ಅಗರ್ವಾಲ್, ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರರಾಗಿದ್ದಾರೆ. ಈ ಹಿಂದೆ ಆರ್‌ಸಿಬಿ ಪರ ಆಡಿದ ಅನುಭವವಿರುವ ಮಯಾಂಕ್, ಒಟ್ಟು 127 ಐಪಿಎಲ್ ಪಂದ್ಯಗಳಲ್ಲಿ 2661 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 13 ಅರ್ಧಶತಕಗಳು ಸೇರಿವೆ. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಆರ್‌ಸಿಬಿಯ ಆರಂಭಿಕ ಕ್ರಮಕ್ಕೆ ಬಲ ತುಂಬುವ ನಿರೀಕ್ಷೆಯಿದೆ.

ಆರ್‌ಸಿಬಿಯ ಮುಂದಿನ ಪಂದ್ಯಗಳು ನಿರ್ಣಾಯಕವಾಗಿದ್ದು, ಗಾಯದ ಸಮಸ್ಯೆಯನ್ನು ಮೀರಿ ತಂಡವು ತನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸಬೇಕಿದೆ.

Exit mobile version