ನವದೆಹಲಿ, ಡಿ.26: ಭಾರತದ ಬಾಲ ಪ್ರತಿಭೆಗಳಿಗೆ ದೊರೆಯುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಈ ವರ್ಷ ಕ್ರಿಕೆಟ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ವೈಭವ್ ಸೂರ್ಯವಂಶಿ ಸ್ವೀಕರಿಸಿ ದೇಶದ ಗಮನ ಸೆಳೆದಿದ್ದಾರೆ. ಕೇವಲ 14 ವರ್ಷದ ಈ ಯುವ ಕ್ರಿಕೆಟಿಗನಿಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
5ರಿಂದ 18 ವರ್ಷದೊಳಗಿನ ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ತೋರಿದ ವಿಶಿಷ್ಟ ಪ್ರತಿಭೆ ಹಾಗೂ ಸಾಧನೆಗಳನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿ, ವೈಭವ್ ಅವರ ಪರಿಶ್ರಮ ಮತ್ತು ನಿಷ್ಠೆಗೆ ಸಿಕ್ಕ ದೊಡ್ಡ ಗೌರವವಾಗಿದೆ. ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ ಸಂರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ ಹಾಗೂ ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲಾಗುತ್ತದೆ.
ಈ ಬಾರಿ ವೈಭವ್ ಸೂರ್ಯವಂಶಿ ಸೇರಿ ಒಟ್ಟು 20 ಮಕ್ಕಳನ್ನು ವಿವಿಧ ವಿಭಾಗಗಳಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ನಿಮ್ಮ ಸಾಧನೆಗಳು ಕೇವಲ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುವಂತಿವೆ. ಪ್ರತಿಯೊಬ್ಬ ಮಕ್ಕಳೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಇಂದು ಗೌರವಿಸಲ್ಪಟ್ಟ ಪ್ರತಿಯೊಂದು ಮಗು ನಮ್ಮ ದೇಶದ ಅಮೂಲ್ಯ ಸಂಪತ್ತಾಗಿದೆ”
ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕಾರದ ಸಲುವಾಗಿ ವೈಭವ್, ಬಿಹಾರ ತಂಡದ ಪರ ಮಣಿಪುರ ವಿರುದ್ಧ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ತಪ್ಪಿಸಿಕೊಂಡರು.
ಕ್ರಿಕೆಟ್‌ನಲ್ಲಿ ವೈಭವ್ ಸಾಧನೆಯ ಕಥೆ
ವೈಭವ್ ಸೂರ್ಯವಂಶಿ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ್ದಾರೆ.
-
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಅವರು 8 ಪಂದ್ಯಗಳು ಮತ್ತು 12 ಇನ್ನಿಂಗ್ಸ್ಗಳಲ್ಲಿ 207 ರನ್ ಗಳಿಸಿದ್ದು, 17.25 ರ ಸರಾಸರಿ ಹೊಂದಿದ್ದಾರೆ. ಇದುವರೆಗೆ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 93 ರನ್.
-
ಲಿಸ್ಟ್-ಎ ಕ್ರಿಕೆಟ್‌ನಲ್ಲಿ, ಕೇವಲ 7 ಪಂದ್ಯಗಳಲ್ಲಿ 322 ರನ್ ಗಳಿಸಿದ್ದು, 46 ರ ಸರಾಸರಿಯೊಂದಿಗೆ 190 ರನ್ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ.
-
T20 ಕ್ರಿಕೆಟ್‌ನಲ್ಲಿ, 18 ಪಂದ್ಯಗಳಲ್ಲಿ 701 ರನ್ ಗಳಿಸಿರುವ ವೈಭವ್, 41.23 ರ ಸರಾಸರಿ ಹಾಗೂ 144 ರನ್ ಗರಿಷ್ಠ ಸ್ಕೋರ್ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಕೂಡ ವೈಭವ್ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. 7 ಪಂದ್ಯಗಳಲ್ಲಿ 252 ರನ್ ಗಳಿಸಿದ್ದು, 36 ರ ಸರಾಸರಿ ಹಾಗೂ 101 ರನ್ ಗರಿಷ್ಠ ಸ್ಕೋರ್ ಅವರ ಬ್ಯಾಟ್‌ನಿಂದ ಬಂದಿದೆ.
ಮುಂದಿನ ಗುರಿ: U19 ವಿಶ್ವಕಪ್
ಈ ಯುವ ಕ್ರಿಕೆಟಿಗನು ಈಗ ಜನವರಿ 15ರಿಂದ ಆರಂಭವಾಗಲಿರುವ ಅಂಡರ್-19 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಭಾರತ U19 ತಂಡದೊಂದಿಗೆ ಸೇರಿಕೊಳ್ಳುವ ನಿರೀಕ್ಷೆಯಿದ್ದು, ದೇಶದ ಅಭಿಮಾನಿಗಳು ಅವರ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
