ದಾವಣಗೆರೆ, ಜೂನ್ 30: ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು, ಆಪರೇಷನ್ ಥಿಯೇಟರ್ (OT) ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಿಂದ ಆಸ್ಪತ್ರೆಯ ಅವರಣದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್, ಅವಘಡದ ವೇಳೆ ಆಪರೇಷನ್ ಥಿಯೇಟರ್‌ನಲ್ಲಿ ಯಾವುದೇ ರೋಗಿಯು ಇಲ್ಲದಿದ್ದುದರಿಂದ ದೊಡ್ಡ ಪ್ರಾಣಹಾನಿ ತಪ್ಪಿದೆ.
ಸಿಲಿಂಡರ್ ಸ್ಫೋಟದಿಂದ ಕೋಟ್ಯಾಂತರ ಮೌಲ್ಯದ ಸಾಮಗ್ರಿಗಳು ನಾಶ
ಜಿಲ್ಲಾಸ್ಪತ್ರೆಯಲ್ಲಿನ ಆಪರೇಷನ್ ಥಿಯೇಟರ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಆಪರೇಷನ್ ಥಿಯೇಟರ್‌ನಲ್ಲಿದ್ದ ಎಲ್ಲಾ ವೈದ್ಯಕೀಯ ಉಪಕರಣಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು ಮತ್ತು ಇತರ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಬೆಂಕಿ ಅವಘಡದಿಂದ ಸುಮಾರು ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಆಪರೇಷನ್ ಥಿಯೇಟರ್ ಸುತ್ತಾಮುತ್ತಲಿನ ಕೊಠಡಿಗಳಿಗೂ ಬೆಂಕಿ ಹರಡಿದ್ದು, ಅಲ್ಲಿದ್ದ ವಸ್ತುಗಳು ನಾಶವಾಗಿದೆ… ದಟ್ಟ ಹೊಗೆಯು ಆಸ್ಪತ್ರೆಯ ಹಲವು ವಿಭಾಗಗಳಿಗೆ ಹರಡಿದ್ದರಿಂದ ರೋಗಿಗಳು ಮತ್ತು ಸಿಬ್ಬಂದಿಗಳಲ್ಲಿ ಆತಂಕದ ಭೀತಿ ಮೂಡಿತು.
ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ
ಬೆಂಕಿ ಅವಘಡದ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಹಲವು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯನ್ನು ನಡೆಸಿದರು.
ಸಿಬ್ಬಂದಿಗಳಿಗೆ ಮರುಜೀವ ಪಡೆದಂತಾದ ದೃಶ್ಯ
ಅವಘಡದ ವೇಳೆ ಆಪರೇಷನ್ ಥಿಯೇಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ ಗ್ರೂಪ್ ನೌಕರರು ಮತ್ತು ಸಿಬ್ಬಂದಿಗಳು ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾದರು. “ಏಕಾಏಕಿ ಸ್ಪಾರ್ಕ್ ಕಾಣಿಸಿಕೊಂಡಿತು, ಕೂಡಲೇ ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡೆವು. ಅದೃಷ್ಟವಶಾತ್ ಯಾವುದೇ ರೋಗಿ ಅಪರೇಷನ್ ಥಿಯೇಟರ್‌ನಲ್ಲಿ ಇರಲಿಲ್ಲ. ಕೂಡಲೇ ನಾವೆಲ್ಲಾ ಸಿಬ್ಬಂದಿಗಳು ಹೊರ ಬಂದೆವು” ಎಂದು ಅವರು ವಿವರಿಸಿದರು.
