ಜಮ್ಮು ಮತ್ತು ಕಾಶ್ಮೀರದಿಂದ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪರ್ವೇಜ್ ರಸೂಲ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 36 ವರ್ಷ ವಯಸ್ಸಿನ ಈ ಆಲ್-ರೌಂಡರ್ , ಅಕ್ಟೋಬರ್ 18 ರಂದು ಬಿಸಿಸಿಐಗೆ ನಿವೃತ್ತಿ ಬಗ್ಗೆ ಹೇಳಿದ್ದಾರೆ.
ಪರ್ವೇಜ್ ರಸೂಲ್, ಜೂನ್ 15, 2014ರಂದು ಬಾಂಗ್ಲಾದೇಶ ವಿರುದ್ಧ ಮಿರ್ಪುರದಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅವರು 10 ಓವರ್‌ಗಳಲ್ಲಿ 60 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದು ಭಾರತದ ಗೆಲುವಿಗೆ ಕೊಡುಗೆ ನೀಡಿದ್ದರು. ನಂತರ ಜನವರಿ 26, 2017ರಂದು ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ತಮ್ಮ ಏಕೈಕ ಟಿ20 ಪಂದ್ಯವನ್ನು ಆಡಿದರು. ಆ ಪಂದ್ಯದಲ್ಲಿ ಅವರು 5 ರನ್‌ಗಳನ್ನು ಕಲೆಹಾಕಿದ್ದಲ್ಲದೇ, ಇಯಾನ್ ಮಾರ್ಗನ್ ಅವರ ವಿಕೆಟ್ ಅನ್ನು ಪಡೆದುಕೊಂಡಿದ್ದರು.
#ParvezRasool, the first #cricketer from Jammu and Kashmir to represent India, has announced his retirement from all formats of the game, bringing an end to a remarkable 17-year-long career marked by consistent performances and multiple milestones. pic.twitter.com/hClUQMj096
— Kashmir News Trust༝ (@kntnewsagency) October 20, 2025
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಸೂಲ್ ಅವರಿಗೆ ಸಿಗಬೇಕಾದ ಅವಕಾಶಗಳು ಸಿಗಲಿಲ್ಲ. ಕೇವಲ ಒಂದು ಏಕದಿನ ಮತ್ತು ಒಂದು ಟಿ20 ಪಂದ್ಯಗಳಲ್ಲಿ ಆಡಿದ ಅವರಿಗೆ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಅವರು ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ರಸೂಲ್ 95 ಪ್ರಥಮ ದರ್ಜೆ ಪಂದ್ಯಗಳಲ್ಲಿ 5648 ರನ್‌ಗಳನ್ನು ಗಳಿಸಿದ್ದು, 352 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇದರ ಜೊತೆಗೆ 164 ಲಿಸ್ಟ್ ಎ ಪಂದ್ಯಗಳು ಮತ್ತು 71 ಟಿ20 ಪಂದ್ಯಗಳನ್ನೂ ಆಡಿದ್ದಾರೆ.
ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಸೂಲ್ ಅವರಿಗೆ 2013/14 ಮತ್ತು 2017/18 ಸೀಜನ್‌ಗಳಲ್ಲಿ ಅತ್ಯುತ್ತಮ ಆಲ್-ರೌಂಡರ್‌ಗಾಗಿ ಲಾಲಾ ಅಮರನಾಥ್ ಟ್ರೋಫಿ ನೀಡಿ ಗೌರವಿಸಲಾಗಿತ್ತು. ಐಪಿಎಲ್‌ನಲ್ಲಿ ಅವರು ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಒಟ್ಟು 11 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.
ಈ ಬಗ್ಗೆ ಮಾತನಾಡಿದ ರಸೂಲ್, ನಾವು ಆಡಲು ಪ್ರಾರಂಭಿಸಿದಾಗ, ಅನೇಕರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನಾವು ಕೆಲವು ದೊಡ್ಡ ತಂಡಗಳನ್ನು ಸೋಲಿಸಿದ್ದೇವೆ ಮತ್ತು ರಣಜಿ ಟ್ರೋಫಿ ಮತ್ತು ಇತರ ಬಿಸಿಸಿಐ-ಸಂಯೋಜಿತ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ತಿಳಿಸಿದರು. ದೀರ್ಘಕಾಲ ತಂಡದ ನಾಯಕತ್ವ ವಹಿಸಿದ್ದ ರಸೂಲ್, ತಂಡದ ಯಶಸ್ಸಿಗೆ ತಾನು ನೀಡಿದ ಕೊಡುಗೆಯಿಂದ ಅಪಾರ ತೃಪ್ತಿ ಹೊಂದಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.