ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಆರಂಭದಲ್ಲಿ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಕೊನೆಗೂ ಬಹುದೊಡ್ಡ ‘ಗುಡ್ ನ್ಯೂಸ್’ ಸಿಕ್ಕಿದೆ. ಮಂಡಿರಜ್ಜು ಗಾಯದಿಂದಾಗಿ ತಂಡದಿಂದ ದೂರ ಉಳಿದಿದ್ದ ಮಾಜಿ ನಾಯಕ, ಸ್ಟಾರ್ ಆಟಗಾರ ಎಂಎಸ್ ಧೋನಿ (MS Dhoni) ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದಾರೆ. ಚೆಪಾಕ್ ಕ್ರೀಡಾಂಗಣದಲ್ಲಿ ಧೋನಿ ನಡೆಸಿದ ಭರ್ಜರಿ ಅಭ್ಯಾಸದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ತಂಡಕ್ಕೆ ಈ ಬಾರಿಯ ಆರಂಭ ಅಂದುಕೊಂಡಷ್ಟು ಸುಖಕರವಾಗಿಲ್ಲ. ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲೇ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಸಿಎಸ್‌ಕೆ, ನಾಯಕತ್ವ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಧೋನಿಯ ಅನುಪಸ್ಥಿತಿಯನ್ನು ಎದುರಿಸುತ್ತಿದೆ. ಮಂಡಿರಜ್ಜು ಗಾಯದ ಸಮಸ್ಯೆಯಿಂದಾಗಿ ಮೊದಲ ಎರಡು ವಾರಗಳ ಕಾಲ ಧೋನಿ ಆಡುವುದಿಲ್ಲ ಎಂದು ಈ ಮೊದಲು ಮ್ಯಾನೇಜ್‌ಮೆಂಟ್ ತಿಳಿಸಿತ್ತು. ಇದೇ ಕಾರಣಕ್ಕೆ ಅವರು ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯಕ್ಕೆ ಹಾಜರಿರಲಿಲ್ಲ.
ಏಪ್ರಿಲ್ 3 ರಂದು ಚೆನ್ನೈನ ತವರು ಮೈದಾನವಾದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎರಡನೇ ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಏಪ್ರಿಲ್ 1 ರಂದು ನಡೆದ ಅಭ್ಯಾಸ ಶಿಬಿರದಲ್ಲಿ ಧೋನಿ ಕಾಣಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಾಲಿನ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಧೋನಿ, ನೆಟ್ಸ್‌ನಲ್ಲಿ ದೀರ್ಘಕಾಲ ಬ್ಯಾಟಿಂಗ್ ನಡೆಸಿದರು.ಹೀಗಾಗಿ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲೇ ಕಣಕ್ಕಿಳಿಯುತ್ತಾರಾ ಅಥವಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಸಿಎಸ್‌ಕೆ ತನ್ನ ಲಯವನ್ನು ಕಂಡುಕೊಳ್ಳಬೇಕಾದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಅತ್ಯಂತ ನಿರ್ಣಾಯಕ. ಆದರೆ, ಪಂಜಾಬ್ ವಿರುದ್ಧ ಚೆನ್ನೈನ ಇತಿಹಾಸ ಅಷ್ಟೊಂದು ಆಶಾದಾಯಕವಾಗಿಲ್ಲ.
-
ಒಟ್ಟು ಮುಖಾಮುಖಿ: 32 ಪಂದ್ಯಗಳು (ಸಿಎಸ್‌ಕೆ 16, ಪಂಜಾಬ್ 16 ಗೆಲುವು).
-
ಚೆಪಾಕ್ ಕ್ರೀಡಾಂಗಣದಲ್ಲಿ: 9 ಪಂದ್ಯಗಳಲ್ಲಿ ಸಿಎಸ್‌ಕೆ 4 ಗೆದ್ದಿದ್ದರೆ, ಪಂಜಾಬ್ 5 ಬಾರಿ ಗೆದ್ದು ಮೇಲುಗೈ ಸಾಧಿಸಿದೆ.
ಈ ಅಂಕಿಅಂಶಗಳನ್ನು ಗಮನಿಸಿದರೆ ಚೆಪಾಕ್‌ನಲ್ಲಿ ಪಂಜಾಬ್ ತಂಡವೇ ಬಲಿಷ್ಠವಾಗಿ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಧೋನಿಯ ಅನುಭವ ಮತ್ತು ನಾಯಕತ್ವದ ಮಾರ್ಗದರ್ಶನ ತಂಡಕ್ಕೆ ಅತ್ಯಗತ್ಯವಾಗಿದೆ. ಧೋನಿ ಮೈದಾನಕ್ಕೆ ಮರಳಿದರೆ ಅದು ಕೇವಲ ಬ್ಯಾಟಿಂಗ್ ಬಲ ಮಾತ್ರವಲ್ಲದೆ, ತಂಡದ ಮನೋಬಲವನ್ನೂ ಹೆಚ್ಚಿಸಲಿದೆ. ಸಿಎಸ್‌ಕೆ ಅಭಿಮಾನಿಗಳು ಏಪ್ರಿಲ್ 3ರ ಸಂಜೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.





